ವಿಚಾರಣೆಗೆ ಹಾಜರಾದ ನಟ ದರ್ಶನ್ ಪತ್ನಿ
ಬೆಂಗಳೂರು, ಮಾ. 16: ಪತಿಯೊಂದಿಗಿನ ಕಲಹಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇಂದು ರಾಜ್ಯ ಮಹಿಳಾ ಆಯೋಗದ ಎದುರು ವಿಚಾರಣೆಗೆ ಹಾಜರಾದರು.
ಇತ್ತೀಚೆಗೆ ನಟ ದರ್ಶನ್-ವಿಜಯಲಕ್ಷ್ಮಿ ನಡುವಿನ ಕಲಹ ಕುರಿತಂತೆ ರಾಜ್ಯ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿತ್ತು. ಈ ಸಂಬಂಧ ದರ್ಶನ್-ವಿಜಯಲಕ್ಷ್ಮಿ ದಂಪತಿಗೆ ವಿಚಾರಣೆಗೆ ಹಾಜರಾಗುವಂತೆ ಆಯೋಗ ಸೂಚನೆ ನೀಡಿತ್ತು. ಇಂದು ನಗರದ ಕಾವೇರಿ ಭವನದಲ್ಲಿರುವ ರಾಜ್ಯ ಮಹಿಳಾ ಆಯೋಗಕ್ಕೆ ಆಗಮಿಸಿದ ವಿಜಯಲಕ್ಷ್ಮಿ, ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರ ಎದುರು ವಿಚಾರಣೆಗೆ ಹಾಜರಾಗಿದ್ದರು. ಆದರೆ ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಲು ವಿಜಯಲಕ್ಷ್ಮಿ ನಿರಾಕರಿಸಿದರು.
ಈ ಬಗ್ಗೆ ಮಾತನಾಡಿದ ಮಹಿಳಾ ಆಯೋಗದ ಆಧ್ಯಕ್ಷೆ ಮಂಜುಳಾ ಮಾನಸ, ಇದೀಗ ವಿಜಯಲಕ್ಷ್ಮಿ ಒಬ್ಬರೇ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಇನ್ನು ದರ್ಶನ್ ಅವರು ಹಾಜರಾಗಿ ಹೇಳಿಕೆ ನೀಡಿದ ಮೇಲೆ ಈ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡುವುದಾಗಿ ತಿಳಿಸಿದರು.
ಮಾಧ್ಯಮದವರ ಮೇಲೆ ಹಲ್ಲೆ?: ಮಹಿಳಾ ಆಯೋಗದ ಕಚೇರಿಗೆ ಆಗಮಿಸಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರನ್ನು ದೃಶ್ಯ ಮಾಧ್ಯಮದ ಪ್ರತಿನಿಧಿಗಳು ಚಿತ್ರೀಕರಿಸಲು ಮುಂದಾದರು. ಈ ವೇಳೆ ಚಿತ್ರೀಕರಣಕ್ಕೆ ವಿರೋಧ ವ್ಯಕ್ತಪಡಿಸಿದ ವಿಜಯಲಕ್ಷ್ಮಿ ಸಂಬಂಧಿಕರು ಮಾಧ್ಯಮದವರ ವಿರುದ್ಧ ವಾಗ್ದಾಳಿ ನಡೆಸಿದರು. ಕೆಲವರ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ.





