ಫಾದರ್ ಚೌರಪ್ಪ ಸೆಲ್ವರಾಜ್ ಚಸರಾ ನಿಧನ

ಬೆಂಗಳೂರು, ಮಾ. 16: ಮೂರು ದಶಕಗಳಿಂದ ನಿರಂತರವಾಗಿ ಕನ್ನಡಪರ ಮತ್ತು ಕನ್ನಡ ಕ್ರೈಸ್ತ ಹೋರಾಟಗಳಲ್ಲಿ ಸಕ್ರಿಯರಾಗಿದ್ದ ಲೇಖಕ ಫಾದರ್ ಚೌರಪ್ಪ ಸೆಲ್ವರಾಜ್ ಚಸರಾ (61) ಇಂದು ಮುಂಜಾನೆ ಸೈಂಟ್ ಫಿಲೋಮಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಫಾ. ಚಸರಾ ಬೆಂಗಳೂರಿನ ಲಿಂಗಾರಾಜಪುರಂನಲ್ಲಿ ಜನಿಸಿದ್ದರು. ಪೂರ್ಣ ಶಿಕ್ಷಣವನ್ನು ಬೆಂಗಳೂರಿನಲ್ಲಿಯೇ ಮುಗಿಸಿದ ಅವರು, ಬೆಂ.ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ಗಳಿಸಿದ್ದರು. 1983ರಲ್ಲಿ ಗುರು ದೀಕ್ಷೆ ಪಡೆದು ರಾಜ್ಯದ ವಿವಿಧ ಜಿಲ್ಲಾ ಭಾಗಗಳ ಚರ್ಚುಗಳಲ್ಲಿ ಧರ್ಮಗುರುವಾಗಿ ಸೇವೆ ಸಲ್ಲಿಸಿದ್ದ ಅವರು, 5 ವರ್ಷಗಳಿಂದ ಬೆಂಗಳೂರು ಚಾಮರಾಜಪೇಟೆಯಲ್ಲಿನ ಸಂತ ಜೋಸೆಫ್ ಚರ್ಚ್‌ನ ಧರ್ಮಗುರುವಾಗಿದ್ದರು.
ಗೋಕಾಕ್ ಚಳವಳಿ, ಕನ್ನಡ ಕ್ರೈಸ್ತ ಚಳವಳಿ ಮೊದಲಾದ ಹೋರಾಟಗಳಲ್ಲಿ ಸಕ್ರಿಯರಾಗಿದ್ದ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದು, ‘ಅದುಮಿಟ್ಟ ನೆನಪಿನ ಪುಟಗಳು’, ‘ಮತಾಂತರ ಸತ್ಯಾನ್ವೇಷಣೆ’ ಎಂಬ ಮೌಲಿಕ ಕೃತಿಗಳನ್ನು ರಚಿಸಿರುವುದರ ಜೊತೆಗೆ ‘ಬೈಬಲ್ ಇತಿಹಾಸ ಮತ್ತು ಬೈಬಲ್ ಧರ್ಮ ಗ್ರಂಥ’ವನ್ನು ಕನ್ನಡಕ್ಕೆ ಅನುವಾದಿಸುವ ಪ್ರಕ್ರಿಯೆಯಲ್ಲಿ ಫಾ.ಚಸರಾ ಪ್ರಮುಖ ಪಾತ್ರ ವಹಿಸಿದ್ದರು.
ಉತ್ತಮ ಸಂಗೀತ ಸಂಯೋಜಕರಾಗಿದ್ದ ಅವರು ಸಾವಿರಾರು ಕ್ರೈಸ್ತ ಗೀತೆಗಳನ್ನು ರಚಿಸಿದ್ದರು. ಜೊತೆಗೆ ತಾವೇ ನಿರ್ದೇಶಿಸಿ ಸಂಚಲನ ಪ್ರಕಾಶನದ ಮೂಲಕ ಧ್ವನಿಸುರುಳಿಗಳನ್ನು ಹೊರತಂದಿದ್ದರು. ಕಳೆದ ಎರಡು ದಶಕಗಳಿಂದ ‘ಮಾತುಕತೆ’ ಎಂಬ ಸಾಹಿತ್ಯ-ಸಾಂಸ್ಕೃತಿಕ ಪತ್ರಿಕೆಯ ಬೆನ್ನೆಲುಬಾಗಿದ್ದರು. ನೂರಾರು ಅನಾಥ ಮಕ್ಕಳನ್ನು ತಮ್ಮ ಬೋರ್ಡಿಂಗ್ ಶಾಲೆಯಲ್ಲಿ ಬೆಳೆಸಿ ಉತ್ತಮ ಶಿಕ್ಷಣ ನೀಡಿದ್ದ ಫಾದರ್ ಚಸರಾ ಗ್ರಾಮಾಂತರ ಪ್ರದೇಶಗಳಲ್ಲಿ ಶಾಲೆಗಳನ್ನು ಸ್ಥಾಪಿಸಿದ್ದರು.
ಬುಧವಾರ ಸಂಜೆ ನಗರದ ಚಾಮರಾಜಪೇಟೆಯ ಬ್ರಿಯಾಂಡ್ ವೃತ್ತದ ಸಂತ ಜೋಸೆಫ್ ಚರ್ಚ್ ಬಳಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಜನರು ಪಾಲ್ಗೊಂಡಿದ್ದರು.
ಮಾ.17ರಂದು ಬೆಳಗ್ಗೆ 10 ಗಂಟೆಗೆ ಚಾಮರಾಜಪೇಟೆಯ ಸಂತ ಜೋಸೆಫ್ ಚರ್ಚ್ ಬಳಿ ಹಾಗೂ ಮರಿಯಾಪುರದಲ್ಲಿ ಗುರುಗಳ ಸಾಮೂಹಿಕ ಪೂಜಾವಿಧಿ-ವಿಧಾನಗಳಿಂದ ಸಮಾಧಿ ಮಾಡಲಾಗುವುದೆಂದು ಫಾ.ಚಸರಾ ಕುಟುಂಬದವರು ತಿಳಿಸಿದ್ದಾರೆ.
ಕನ್ನಡದ ಅನೇಕ ಸಾಹಿತಿಗಳು, ಪ್ರಗತಿಪರ ಚಿಂತಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಫಾ.ಚಸರಾ ಕರ್ನಾಟಕದ ಕ್ರೈಸ್ತ ದೇವಾಲಯಗಳಲ್ಲಿ ಬಲಿಪೂಜೆಗಳು ಕನ್ನಡದ ಮೂಲಕ ನೆರವೇರಬೇಕು ಎಂದು ಒತ್ತಾಯಿಸಿ ಸಂಘಟಿತ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕದ ಕ್ರೈಸ್ತ ಸಮುದಾಯದ ಶಕ್ತಿಯಂತಿದ್ದ ಫಾ.ಚಸರಾ ಅವರ ನಿಧನಕ್ಕೆ ಅಸಂಖ್ಯ ಮಂದಿ ಕಂಬನಿ ಮಿಡಿದಿದ್ದಾರೆ.







