ಮುಸ್ಲಿಮರಿಗಾಗಿ 15 ಮಾದರಿ ಕಾಲೇಜು, 592 ಹಾಸ್ಟೆಲ್ ಮಂಜೂರು: ನಖ್ವಿ
ಹೊಸದಿಲ್ಲಿ, ಮಾ.16: ಮುಸ್ಲಿಮ್ ಸಮುದಾಯದ ಮಹಿಳೆಯರಲ್ಲಿ ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸುವುದಕ್ಕಾಗಿ ಹುಡುಗಿಯರಿಗೂ ಸೇರಿ 15 ಪದವಿ ಕಾಲೇಜುಗಳು ಹಾಗೂ 592 ಹಾಸ್ಟೆಲ್‌ಗಳನ್ನು ಸ್ಥಾಪಿಸಲು ಸರಕಾರ ಮಂಜೂರಾತಿ ನೀಡಿದೆಯೆಂದು ಲೋಕಸಭೆಗಿಂದು ತಿಳಿಸಲಾಗಿದೆ.
ಒಟ್ಟು ಮಾದರಿ ಪದವಿ ಕಾಲೇಜುಗಳಲ್ಲಿ(ಎಂಡಿಸಿ) 11 ಕಾಲೇಜುಗಳನ್ನು ಉತ್ತರಪ್ರದೇಶದಲ್ಲಿ ಹಾಗೂ ನಾಲ್ಕನ್ನು ಬಿಹಾರದಲ್ಲಿ ಸ್ಥಾಪಿಸಲಾಗುವುದು. ಅಲ್ಲದೆ, ಅರುಣಾಚಲಪ್ರದೇಶ, ಅಸ್ಸಾಂ, ಕರ್ನಾಟಕ ಹಾಗೂ ಕೇರಳಗಳಲ್ಲಿ ತಲಾ ಒಂದರಂತೆ 4 ಎಂಡಿಸಿಗಳನ್ನು ಮೇಲ್ದರ್ಜೆಗೇರಿಸಲು ಸರಕಾರ ನಿರ್ಧರಿಸಿದೆಯೆಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಹಾಯಕ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಲಿಖಿತ ಉತ್ತರವೊಂದರಲ್ಲಿ ಹೇಳಿದ್ದರು.
12ನೆ ಪಂಚವಾರ್ಷಿಕ ಯೋಜನೆಯಲ್ಲಿ ಬಹುವಲಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಸಚಿವಾಲಯವು 15 ಪದವಿ ಕಾಲೇಜು ಹಾಗೂ 592 ಹಾಸ್ಟೆಲ್‌ಗಳ (77 ಪೂರ್ಣಗೊಂಡಿವೆ) ಸ್ಥಾಪನೆಯ ಪ್ರಸ್ತಾಪವನ್ನು ಮಂಜೂರು ಮಾಡಿದೆ. ಅಲ್ಪಸಂಖ್ಯಾತ ಬಾಹುಳ್ಯದ ಪ್ರದೇಶಗಳಲ್ಲಿ ಹುಡುಗಿಯರಿಗೂ ಹಾಸ್ಟೆಲ್‌ಗಳು ಇವುಗಳಲ್ಲಿ ಸೇರಿವೆಯೆಂದು ನಖ್ವಿ ತಿಳಿಸಿದರು.
2011ರ ಜನಗಣತಿಯಂತೆ ಮುಸ್ಲಿಮರಲ್ಲಿ ಸಾಕ್ಷರತಾ ಪ್ರಮಾಣವು ಶೇ.68.5 ಇತ್ತು. 2001ರ ಶೇ.59.1ಕ್ಕೆ ಹೋಲಿಸಿದರೆ ಇದು ಭಾರೀ ಹೆಚ್ಚಿದೆಯೆಂದು ಅವರು ಹೇಳಿದರು. 2011ರ ಸಮೀಕ್ಷೆಯ ಪ್ರಕಾರ ಮುಸ್ಲಿಮ್ ಪುರುಷರಲ್ಲಿ ಸಾಕ್ಷರತೆಯ ಪ್ರಮಾಣ ಶೇ.74.7 ಇದ್ದರೆ ಮಹಿಳೆಯರಲ್ಲಿ ಶೇ. 62ರಷ್ಟಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಇತರ ಹಿಂದುಳಿದ ಜಾತಿಗಳು, ಬಡತನ ರೇಖೆಗಿಂತ ಕೆಳಗಿರುವವರು ಹಾಗೂ ಅಲ್ಪ ಸಂಖ್ಯಾತ ಸಮುದಾಯಗಳ 14-18ರ ನಡುವಿನ ವಯೋಮಾನದ ವಿದ್ಯಾರ್ಥಿನಿಯರಿಗಾಗಿ, ಎಚ್‌ಆರ್‌ಡಿ ಸಚಿವಾಲಯ ಜಾರಿಗೊಳಿಸುತ್ತಿರುವ ಇನ್ನೊಂದು ಯೋಜನೆಯಲ್ಲಿ 2,226 ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಸರಕಾರ ಮಂಜೂರಾತಿ ನೀಡಿದೆಯೆಂದು ನಕ್ವಿ ತಿಳಿಸಿದರು.





