ಗೋಮಾಂಸ ತಿಂದ ಆರೋಪ: ರಾಜಸ್ಥಾನ ವಿವಿಯಲ್ಲಿ ನಾಲ್ವರು ಕಾಶ್ಮೀರಿ ವಿದ್ಯಾರ್ಥಿಗಳಿಗೆ ಥಳಿತ

ಜೈಪುರ, ಮಾ.16: ಹಾಸ್ಟೆಲ್ ಕೊಠಡಿಯಲ್ಲಿ ಗೋಮಾಂಸ ಬೇಯಿಸುತ್ತಿದ್ದಾರೆಂಬ ಗಾಳಿ ಸುದ್ದಿಯ ಹಿನ್ನೆಲೆಯಲ್ಲಿ ರಾಜಸ್ಥಾನದ ಖಾಸಗಿ ವಿಶ್ವವಿದ್ಯಾನಿಲಯವೊಂದರಲ್ಲಿ ನಾಲ್ವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಥಳಿಸಲಾಗಿದೆ. ಬಳಿಕ ಥಳಿತ ಕ್ಕೊಳಗಾದ ವಿದ್ಯಾರ್ಥಿಗಳನ್ನೇ ಪೊಲೀಸರು ಬಂಧಿಸಿದ ಘಟನೆಯೂ ನಡೆದಿದೆ.
ಜೈಪುರದಿಂದ ಸುಮಾರು 300 ಕಿ.ಮೀ. ದೂರದ ಚಿತ್ತೋರ್‌ಗಡದ ಮೇವಾಡ್ ವಿಶ್ವವಿದ್ಯಾನಿಲಯದಲ್ಲಿ ಸೋಮವಾರ ಈ ಘಟನೆ ನಡೆದಿದೆಯೆಂದು ಆರೋಪಿಸಲಾಗಿದೆ.
ನಾಲ್ವರು ಯುವಕರ ಮೇಲೆ ನಡೆದ ದಾಳಿಯನ್ನು ತಡೆಯಲು ಪೊಲೀಸರನ್ನು ಕರೆಸಲಾಗಿತ್ತು. ಕೆಲವು ಬಲಪಂಥೀಯ ಕಾರ್ಯಕರ್ತರು ವಿವಿಯ ಆವರ ಣಕ್ಕೆ ಬಂದು ಘೋಷಣೆಗಳನ್ನು ಕೂಗಿದರೆಂದು ವರದಿಯಾಗಿದೆ. ಪರಿಸ್ಥಿತಿ ಹದ್ದು ಮೀರುವ ಮೊದಲೇ ಅದನ್ನು ನಿಯಂತ್ರಿಸಲಾಯಿತೆಂದು ಪೊಲೀಸರು ತಿಳಿಸಿದ್ದಾರೆ. ಬೇಯಿಸಲಾಗುತ್ತಿದ್ದ ಮಾಂಸವನ್ನು ವಿಧಿವಿಜ್ಞ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆಯೆಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನಮ್ಮಲ್ಲಿ ದೇಶಾದ್ಯಂತದ-23 ರಾಜ್ಯಗಳ - ವಿದ್ಯಾರ್ಥಿಗಳಿ ದ್ದಾರೆ. ಇದೊಂದು ಮಿನಿ ಭಾರತದಂತಿದೆ. ವಿದ್ಯಾರ್ಥಿಗಳು ವಿವಿಧ ಸಾಮಾಜಿಕ-ಸಾಂಸ್ಕೃತಿಕ ಹಿನ್ನೆಲೆಯವರಾಗಿರುವ ಕಾರಣ ಇಂತಹ ಸಣ್ಣ ಘರ್ಷಣೆಗಳು ಕೆಲವೊಮ್ಮೆ ನಡೆಯುತ್ತವೆಯೆಂದು ವಿಶ್ವವಿದ್ಯಾನಿಲಯದ ಮಾಧ್ಯಮ ಸಮನ್ವಯಾಧಿಕಾರಿ ಹರೀಶ್ ಗುರ್ನಾನಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದ ಎಲ್ಲ ವಿದ್ಯಾರ್ಥಿಗಳ ವಿವರಗಳನ್ನು ತಾಳೆ ನೋಡುವಂತೆ ಕೋಲ್ಕತಾದ ಕಾಲೇಜುಗಳಿಗೆ ಸೂಚಿಸಲಾಗಿದೆಯೆಂಬ ವರದಿಯೊಂದರ ಬಳಿಕ, ತನ್ನ ಸೂಚನೆಯನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆಯೆಂದು ಗೃಹ ಸಚಿವಾಲಯದ ಮೂಲಗಳು ನಿನ್ನೆ ಸ್ಪಷ್ಟೀಕರಣ ನೀಡಿದ್ದವು.
ಕಾಲೇಜುಗಳಲ್ಲಿ ತಮ್ಮ ವಿದ್ಯಾರ್ಥಿಗಳನ್ನು ಸಂಶಯದಿಂದ ಹಾಗೂ ಹಗೆತನದಿಂದ ನಡೆಸಿಕೊಳ್ಳಲಾಗುತ್ತಿದೆಯೆಂಬ ಭಾವನೆ ಜಮ್ಮು-ಕಾಶ್ಮೀರದ ಜನರಲ್ಲಿದೆಯೆಂದು ಫೆಬ್ರವರಿಯಲ್ಲಿ ರಾಜ್ಯ ಸರಕಾರಗಳಿಗೆ ಕಳುಹಿಸಲಾಗಿದ್ದ ಸೂಚನೆಯೊಂದರಲ್ಲಿ ತಿಳಿಸಲಾಗಿತ್ತು. ಅದನ್ನು ಎನ್‌ಡಿಟಿವಿ ನೋಡಿದೆ.
ಉದಾಹರಣೆಗೆ, ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳಿಗೆ ವಾಸ್ತವ್ಯ ಹುಡುಕಲು ಕಷ್ಟವಾಗುತ್ತಿದೆಯೆಂಬ ಅವರ ಕುಟುಂಬಗಳ ದೂರಿನ ಹಿನ್ನೆಲೆಯಲ್ಲಿ ‘ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳ ಸುರಕ್ಷೆಯನ್ನು ಖಚಿತಪಡಿಸುವಂತೆ’ ರಾಜ್ಯಗಳಿಗೆ ಸೂಚಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಶ್ಮೀರಿ ವಿದ್ಯಾರ್ಥಿಗಳನ್ನು ನಿಭಾಯಿಸುವಲ್ಲಿ ‘ಅತ್ಯಂತ ಎಚ್ಚರಿಕೆ ಹಾಗೂ ಸೂಕ್ಷ್ಮತೆಯನ್ನು’ ತೋರಿಸುವಂತೆಯೂ ಸೂಚನೆಯಲ್ಲಿ ಹೇಳಲಾಗಿದೆ.
...
ಭದ್ರತಾ ಸಂಸ್ಥೆಗಳ ಮೂಲಕ ಭಾರತಾದ್ಯಂತ ಕಾಶ್ಮೀರಿ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದ್ದು, ಆ ಮೂಲಕ ಅವರನ್ನು ‘ಅಸುರಕ್ಷಿತರನ್ನಾಗಿಸುತ್ತಿದೆ’.
- ಉಮರ್ ಅಬ್ದುಲ್ಲಾ, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ







