ದೇಶದ್ರೋಹ ಕಾನೂನಿನ ವ್ಯಾಖ್ಯೆ ‘ತುಂಬ ವಿಶಾಲ’: ಒಪ್ಪಿಕೊಂಡ ಸರಕಾರ

ಹೊಸದಿಲ್ಲಿ, ಮಾ.16: ದೇಶದ್ರೋಹ ಕಾನೂನಿನ ವ್ಯಾಖ್ಯೆಯು ‘ತುಂಬ ವಿಶಾಲ’ವಾಗಿದೆ ಎಂದು ಬುಧವಾರ ರಾಜ್ಯಸಭೆಯಲ್ಲಿ ಒಪ್ಪಿಕೊಂಡ ಸರಕಾರವು, ಕಾನೂನು ಆಯೋಗವು ಅದನ್ನು ಪುನರ್‌ಪರಿಶೀಲಿಸುತ್ತಿದೆ ಎಂದು ತಿಳಿಸಿದೆ. ದೇಶದ್ರೋಹ ಕಾನೂನು ಬ್ರಿಟಿಷ್ ಯುಗದ ಪಳೆಯುಳಿಕೆಯಾಗಿದ್ದು, ಅದನ್ನು ರದ್ದುಗೊಳಿಸಬೇಕೆಂದು ಸದಸ್ಯರು ಆಗ್ರಹಿಸಿದ ಹಿನ್ನೆಲೆಯಲ್ಲಿ ಸರಕಾರದ ಈ ಹೇಳಿಕೆ ಹೊರಬಿದ್ದಿದೆ.
ಜೆಎನ್‌ಯು ವಿವಾದದ ಹಿನ್ನೆಲೆಯಲ್ಲಿ ಗಮನ ಸೆಳೆದಿರುವ ಈ ಕಾನೂನಿನ ಕುರಿತು ಕಾನೂನು ಆಯೋಗವು ತನ್ನ ವರದಿಯನ್ನು ಸಲ್ಲಿಸಿದ ನಂತರ ವಿಷಯವನ್ನು ಚರ್ಚಿಸಲು ಸರ್ವ ಪಕ್ಷ ಸಭೆಯೊಂದನ್ನು ಕರೆಯಲು ಗೃಹಸಚಿವ ರಾಜನಾಥ್ ಸಿಂಗ್ ಅವರು ಒಪ್ಪಿಕೊಂಡರು.
ತಾನು ಈ ಕಾನೂನನ್ನು ಮಿತಿಮೀರಿ ಬಳಸುತ್ತಿದ್ದೇನೆ ಎಂಬ ಪ್ರತಿಪಕ್ಷಗಳ ಆರೋಪವನ್ನು ನಿರಾಕರಿಸಿದ ಸರಕಾರವು, ಜೆಎನ್‌ಯುದ ಒಂದು ಪ್ರಕರಣವನ್ನು ಹೊರತುಪಡಿಸಿ ಹೆಚ್ಚಿನ ದೇಶದ್ರೋಹ ಪ್ರಕರಣಗಳು ದಿಲ್ಲಿಯ ಹೊರಗಡೆಯೇ ದಾಖಲಾಗಿವೆ ಎಂದು ಬೆಟ್ಟು ಮಾಡಿತು.
ಸರಕಾರದ ವಿರುದ್ಧ ಮಾತನಾಡುವ ಯಾವನೇ ವ್ಯಕ್ತಿಯ ವಿರುದ್ಧ ಈ ಕಾನೂನಿನಡಿ ಪ್ರಕರಣವನ್ನು ದಾಖಲಿಸಿಕೊಳ್ಳಬಹುದಾಗಿದೆ. ಕಾನೂನಿನ ವ್ಯಾಖ್ಯೆಯು ತುಂಬ ವಿಶಾಲವಾಗಿರುವುದರಿಂದ ತಿದ್ದುಪಡಿಗಳು ಕೇಳಿಬರುತ್ತಿವೆ.
ಹಲವಾರು ಪ್ರಕರಣಗಳಿರುವುದರಿಂದ ಕಳವಳಗಳನ್ನೆತ್ತಲಾಗುತ್ತಿದೆ. ಕಾನೂನನ್ನು ಸಮಗ್ರವಾಗಿ ಪರಿಶೀಲಿಸುವಂತೆ ಕಾನೂನು ಆಯೋಗವನ್ನು ಕೋರಲು ತಾನು ಬಯಸಿದ್ದೇನೆ ಎಂದು ಸಹಾಯಕ ಗೃಹ ಸಚಿವ ಕಿರಣ್ ರಿಜಿಜು ಹೇಳಿದರು. ಸಾಧ್ಯವಾದಷ್ಟು ಶೀಘ್ರ ವರದಿಯನ್ನು ಸಲ್ಲಿಸುವಂತೆ ಸರಕಾರವು ಆಯೋಗಕ್ಕೆ ಸೂಚಿಸಿದೆ ಎಂದು ಸಿಂಗ್ ತಿಳಿಸಿದರು.
ದೇಶದ್ರೋಹ ಕಾನೂನು ದೋಷಪೂರಿತವಾಗಿದೆ ಎಂದು ಆಯೋಗವು ತನ್ನ 42ನೆ ವರದಿಯಲ್ಲಿ ಹೇಳಿದೆ. ಆದರೆ ಅದನ್ನು ರದ್ದುಗೊಳಿಸಲು ಅದು ಒಲವು ವ್ಯಕ್ತಪಡಿಸಿಲ್ಲ ಎಂದರು.
ಎನ್‌ಡಿಎ ಸರಕಾರವು ಈ ಕಾನೂನನ್ನು ಮಿತಿಮೀರಿ ಬಳಸುತ್ತಿದೆ ಎಂಬ ಪ್ರತಿಪಕ್ಷ ಆರೋಪವನ್ನು ತಳ್ಳಿಹಾಕಿದ ರಿಜಿಜು, ರಾಹುಲ್ ಗಾಂಧಿ ಮತ್ತು ಅರವಿಂದ್‌ಕೇಜ್ರಿವಾಲ್ ವಿರುದ್ಧದ ದೇಶದ್ರೋಹ ಪ್ರಕರಣಗಳು ದಿಲ್ಲಿಯಲ್ಲಲ್ಲ, ತೆಲಂಗಾಣದಲ್ಲಿ ದಾಖಲಾಗಿವೆ ಎಂದು ಬೆಟ್ಟು ಮಾಡಿದರು.
ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕದ ವರದಿಯನ್ನು ಉಲ್ಲೇಖಿಸಿದ ಅವರು, 2014ರಲ್ಲಿ ದೇಶಾದ್ಯಂತ ಒಟ್ಟು 47 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಗರಿಷ್ಠ 16 ಪ್ರಕರಣಗಳು ಬಿಹಾರದಲ್ಲಿ ದಾಖಲಾಗಿವೆ ಮತ್ತು ಅವುಗಳಿಗೆ ಸಂಬಂಧಿಸಿದಂತೆ 28 ಜನರನ್ನು ಬಂಧಿಸಲಾಗಿದೆ. ನಂತರದ ಸ್ಥಾನಗಳಲ್ಲಿ ಜಾರ್ಖಂಡ್, ಕೇರಳ ಮತ್ತು ಒಡಿಶಾ ರಾಜ್ಯಗಳಿವೆ ಎಂದು ತಿಳಿಸಿದರು.
ಸರಕಾರವು ವಿದ್ಯಾರ್ಥಿಗಳ ವಿರುದ್ಧ ಕ್ರಮವನ್ನು ಕೈಗೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ನೇರವಾಗಿ ಆರೋಪಿಸುತ್ತಿವೆ, ಆದರೆ ವಾಸ್ತವದಲ್ಲಿ ಕೆಲವು ರಾಜಕಾರಣಿಗಳ ವಿರುದ್ಧವೂ ದೇಶದ್ರೋಹ ಪ್ರಕರಣಗಳು ದಾಖಲಾಗಿವೆ ಎಂದರು.







