ಎತ್ತಿನಹೊಳೆ ಯೋಜನೆ ಮಂಜೂರಾದಾಗ ಜಿಲ್ಲೆಯ ಬಿಜೆಪಿಗರು ಎಲ್ಲಿದ್ದರು?
ಸಚಿವ ರಮಾನಾಥ ರೈ ಪ್ರಶ್ನೆ

ಬಂಟ್ವಾಳ, ಮಾ.16: ಎತ್ತಿನಹೊಳೆ ಯೋಜನೆಯನ್ನು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಮಂಜೂರು ಮಾಡಿ ಆಗಿನ ಗೃಹ ಸಚಿವ ವಿ.ಎಸ್.ಆಚಾರ್ಯ ಯೋಜನೆ ಘೋಷಣೆ ಮಾಡಿದಾಗ ನಳಿನ್ ಕುಮಾರ್ ಕಟೀಲ್, ಪ್ರತಾಪಸಿಂಹ ನಾಯಕ್ ಜೀವಂತವಿರಲಿಲ್ಲವೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಖಾರವಾಗಿ ಟೀಕಿಸಿದ್ದಾರೆ.
ಬಿ.ಸಿ.ರೋಡ್‌ನ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಬುಧವಾರ ಬಂಟ್ವಾಳ ಬ್ಲಾಕ್ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್‌ನ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ, ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅಭಿನಂದನೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಕಸ್ತೂರಿ ರಂಗನ್ ವಿಚಾರದಲ್ಲಿ ಮೂಗು ತೂರಿಸುತ್ತಿದ್ದ ಬಿಜೆಪಿಗರು ಈಗ ಬಾಲ ಮುದುರಿಸಿ ಕುಳಿತುಕೊಂಡಿದ್ದಾರೆ. ಬಿಜೆಪಿಯೇ ಸೃಷ್ಟಿಸಿದ ಎತ್ತಿನಹೊಳೆ ಯೋಜನೆ ಕುರಿತು ಅದರ ನಾಯಕರಲ್ಲೇ ಒಮ್ಮತದ ಅಭಿಪ್ರಾಯವಿಲ್ಲ. ದ.ಕ. ಜಿಲ್ಲೆಯ ಬಿಜೆಪಿ ನಾಯಕರು ಯೋಜನೆಯನ್ನು ವಿರೋಧಿಸುತ್ತಿದ್ದರೆ ಬಯಲುಸೀಮೆಯ ಬಿಜೆಪಿಗರು ಯೋಜನೆ ಪರ ನಿಲುವು ಹೊಂದಿದ್ದಾರೆ. ಬಿಜೆಪಿ ಚುನಾವಣೆಗೆಂದೇ ಹುಟ್ಟಿದ ಪಕ್ಷ. ಕಾಂಗ್ರೆಸನ್ನು ದೂರುವ ಮೊದಲು ಬಿಜೆಪಿ ನಾಯಕರು ತಮ್ಮೆಳಗಿನ ಗೊಂದಲವನ್ನು ನಿವಾರಿಸಲಿ ಎಂದು ಸಚಿವರು ಲೇವಡಿ ಮಾಡಿದರು. ಅಭಿವೃದ್ಧಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ದೇಶದಲ್ಲೇ ಮೂರನೆ ಸ್ಥಾನದಲ್ಲಿದ್ದು, ನರೇಂದ್ರ ಮೋದಿಯ ಗುಜರಾತ್ ಐದನೆ ಸ್ಥಾನದಲ್ಲಿದೆ. ರಾಜ್ಯದ ಪ್ರತಿ ಕ್ಷೇತ್ರದಲ್ಲೂ ಗಣನೀಯ ಅಭಿವೃದ್ಧಿ ಕಾರ್ಯಗಳಾಗುತ್ತಿದ್ದು, ಕೇಂದ್ರ ಹಾಗೂ ಬಿಜೆಪಿ ಆಡಳಿತದ ರಾಜ್ಯ ಸರಕಾರಗಳು ಕರ್ನಾಟಕವನ್ನು ಮಾದರಿಯನ್ನಾಗಿಸಲಿ ಎಂದು ಹೇಳಿದರು. ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಚ್.ಖಾದರ್, ಬುಡಾ ಅಧ್ಯಕ್ಷ ಪಿಯೂಸ್ ಎಲ್. ರೊಡ್ರಿಗಸ್, ಜಿಪಂ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಶಾಹುಲ್ ಹಮೀದ್, ಮಮತಾ ಗಟ್ಟಿ, ಎಂ.ಎಸ್.ಮುಹಮ್ಮದ್, ಮಂಜುಳಾ ಮಾಧವ ಮಾವೆ, ಪದ್ಮಶೇಖರ ಜೈನ್, ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಮಾಜಿ ಅಧ್ಯಕ್ಷೆ ವಸಂತಿ ಚಂದಪ್ಪ, ಪಕ್ಷದ ಪ್ರಮುಖರಾದ ಸುದರ್ಶನ್ ಜೈನ್, ಪದ್ಮನಾಭ ರೈ, ರಾಜಶೇಖರ್ ನಾಯ್ಕೆ, ಜನಾರ್ದನ ಚೆಂಡ್ತಿಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಅಲಿ, ಚಂದ್ರಹಾಸ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು. ಪರಮೇಶ್ವರ ಎಂ.ಸ್ವಾಗತಿಸಿದರು. ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಭಾವುಕರಾಗಿ ಕಣ್ಣೀರಿಟ್ಟ ಸಚಿವ ರೈ
ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಸಚಿವ ರಮಾನಾಥ ರೈ ಭಾಷಣದ ಕೊನೆಯಲ್ಲಿ ಬಿಜೆಪಿಗರು ತನ್ನ ವಿರುದ್ಧ ಮಾಡುತ್ತಿರುವ ಆರೋಪಗಳನ್ನು ವಿವರಿಸುತ್ತಾ ಭಾವುಕರಾಗಿ ಕಣ್ಣೀರು ಸುರಿಸಿದರು. ಎತ್ತಿನಹೊಳೆ ಯೋಜನೆ, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ, ಮರ ಸಾಗಾಟಕ್ಕೆ ಸಂಬಂಧಿಸಿ ಬಿಜೆಪಿ ಮುಖಂಡರು ಇತ್ತೀಚಿನ ದಿವಸಗಳಲ್ಲಿ ತನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಹಾಗೂ ಅಪಹಾಸ್ಯ ಮಾಡುತ್ತಿದ್ದು, ನಾನು ಯಾವುದೇ ಅಕ್ರಮಗಳಲ್ಲಿ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಭಾಗಿಯಾಗಿಲ್ಲ. ಸುಳ್ಳು ನುಡಿಯುವವರಿಗೆ ದೇವರೇ ಒಳ್ಳೆಯ ಬುದ್ಧಿ ನೀಡಲಿ ಎಂದು ಹೇಳಿದರು. ತಾನು ಉದಾಸಿನ ರಾಜಕಾರಣಿ ಅಲ್ಲ. ಕ್ಷೇತ್ರದ ಹಾಗೂ ಜಿಲ್ಲೆಯ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರ ಹಾಗೂ ದ.ಕ. ಜಿಲ್ಲೆಯನ್ನು ರಾಜ್ಯದಲ್ಲೇ ಮಾದರಿಯನ್ನಾಗಿ ಪರಿವರ್ತಿಸಲು ಶ್ರಮಿಸುತ್ತಿದ್ದೇನೆ. ನನ್ನನ್ನು 7 ಬಾರಿ ಶಾಸಕನಾಗಿ, 3 ಬಾರಿ ಮಂತ್ರಿಯಾಗಿ ಆಯ್ಕೆ ಮಾಡಿದ ಕ್ಷೇತ್ರದ ಜನತೆಯ ಋಣವನ್ನು ತೀರಿಸುತ್ತೇನೆ ಎಂದು ಭಾವುಕರಾಗಿಯೇ ನುಡಿದರು. ಈ ವೇಳೆ ಇಡೀ ಸಭೆ ವೌನವಾಗಿ ಸೇರಿದ ಎಲ್ಲರ ಕಣ್ಣಲ್ಲೂ ನೀರು ಜಿನುಗಿ, ಕಣ್ಣೊರೆಸಿಕೊಳ್ಳುತ್ತಿದ್ದ ದೃಶ್ಯಗಳು ಕಂಡುಬಂದವು.







