ವಾರದೊಳಗೆ ಸರಿಪಡಿಸದಿದ್ದರೆ ಹೋರಾಟ: ಕೋಟ ಉಡುಪಿ ಜಿಲ್ಲೆಯಲ್ಲಿ ಮರಳು ಪೂರೈಕೆ ಸಮಸ್ಯೆ

ಉಡುಪಿ, ಮಾ.16: ರಾಜ್ಯ ಸರಕಾರ ಮತ್ತು ಉಡುಪಿ ಜಿಲ್ಲಾಡಳಿತ ಜಿಲ್ಲೆಯ ಮರಳು ನೀತಿಯಲ್ಲಿ ಗೊಂದಲ ಮೂಡಿಸಿದ್ದು, ಇದನ್ನು ಕೂಡಲೇ ಸಮರ್ಪಕಗೊಳಿಸುವಂತೆ ಒತ್ತಾಯಿಸಿ ಬಿಜೆಪಿ ಉಡುಪಿ ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾದ ನೇತೃತ್ವದಲ್ಲಿ ಬುಧವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ, ಮಂಗಳೂರು, ಉತ್ತರ ಕನ್ನಡ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ರೂಪಿಸಿ ಇಲ್ಲಿನ ಜನತೆಗೆ ಮರಳು ಲಭ್ಯತೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೆ ಹೊರ ಜಿಲ್ಲೆಗಳಿಗೆ ಮರಳು ಸಾಗಾಟ ಮಾಡುವುದನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಇನ್ನೊಂದು ವಾರದಲ್ಲಿ ಮರಳು ಸಮಸ್ಯೆ ಪರಿ ಹರಿಸದಿದ್ದರೆ ಪಕ್ಷದ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸೇರಿ ಮರಳು ತೆಗೆದು ಜನಸಾಮಾನ್ಯರಿಗೆ ನೀಡುವ ಕೆಲಸ ಮಾಡಲಾಗುವುದು. ತಾಕತ್ತಿದ್ದರೆ ಸರಕಾರ ನಮ್ಮನ್ನು ಬಂಧಿಸಲಿ ಎಂದು ಸವಾಲು ಹಾಕಿದರು.
ಮಾಜಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಈಗಿನ ಮರಳು ನೀತಿ ಕರಾವಳಿ ಭಾಗಕ್ಕೆ ವಿರುದ್ಧ ವಾಗಿದ್ದು, ಸರಕಾರ ಹಾಗೂ ಜಿಲ್ಲಾಡಳಿತ ಉದ್ದೇಶ ಪೂರ್ವಕವಾಗಿ ಮರಳಿಗೆ ನಿಷೇಧ ಹೇರಿ ಮರಳು ಮಾಫಿಯವನ್ನು ಬಲಪಡಿಸುವ ಕೆಲಸ ಮಾಡುತ್ತಿದೆ. ಮರಳಿನ ಕೊರತೆ ಉಂಟು ಮಾಡಿ ಆ ಮೂಲಕ ಅದರ ದರ ಹೆಚ್ಚಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಹೊರ ಜಿಲ್ಲೆಯಲ್ಲಿ ಹೆಚ್ಚಿನ ದರ ಸಿಗುತ್ತಿರುವುದರಿಂದ ಉಡುಪಿ ಜಿಲ್ಲೆಯ ಶೇ.80ರಷ್ಟು ಮರಳನ್ನು ಹೊರ ಜಿಲ್ಲೆಗಳಿಗೆ ಸಾಗಿಸಿ ಮಾರಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ಮುಂದೆ ನಮ್ಮಲ್ಲಿ ಮರಳಿನ ಕೊರತೆ ಉಂಟಾಗಿ ಕಾಮಗಾರಿಗಳು ಸ್ಥಗಿತಗೊಂಡು ಅಭಿವೃದ್ಧಿ ಕುಂಠಿತವಾಗಲಿದೆ ಎಂದು ಅವರು ಟೀಕಿಸಿದರು.
ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಧರಣಿಯಲ್ಲಿ ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದೇಶ್, ಮುಖಂಡರಾದ ರಾಜಪ್ಪ, ಸುಕುಮಾರ್ ಶೆಟ್ಟಿ, ಶ್ಯಾಮಲಾ ಕುಂದರ್, ಉದಯ ಕುಮಾರ್ ಶೆಟ್ಟಿ, ರಾಘವೇಂದ್ರ ಕಿಣಿ, ಯಶ್ಪಾಲ್ ಸುವರ್ಣ, ಬಿ.ಎನ್.ಶಂಕರ ಪೂಜಾರಿ, ಗೀತಾಂಜಲಿ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.







