ಬಿಎಸ್ಸೆನ್ನೆಲ್-ಗ್ರಾಪಂ ನಡುವೆ ತಿಕ್ಕಾಟ: ದೂರವಾಣಿ ಸ್ಥಗಿತ
ನೆಕ್ಕಿಲಾಡಿ ಗ್ರಾಪಂ ವ್ಯಾಪ್ತಿಯ ಬಿಎಸ್ಸೆನ್ನೆಲ್ ಗ್ರಾಹಕರ
ಮಂಗಳೂರು, ಮಾ.16: ಬಿಎಸ್ಸೆನ್ನೆಲ್ ಹಾಗೂ ಗ್ರಾಪಂ ನಡುವಿನ ಸಮಸ್ಯೆಯಿಂದ 34ನೆ ನೆಕ್ಕಿಲಾಡಿ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಒಂದು ವಾರದಿಂದೀಚೆಗೆ ಬಿಎಸ್ಸೆನ್ನೆಲ್ ದೂರವಾಣಿ ಸಂಪರ್ಕದಿಂದ ವಂಚಿತರಾಗಿರುವ ಬಗ್ಗೆ ಗ್ರಾಮಸ್ಥರು ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ.
ಒಂದು ವಾರದ ಹಿಂದೆ ನೆಕ್ಕಿಲಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಂಪರ್ಕಕ್ಕಾಗಿ ಪೈಪ್ ಅಳವಡಿಸಲು ಕಾಮಗಾರಿ ಆರಂಭಗೊಂಡಿತ್ತು. ಈ ಸಂದರ್ಭದಲ್ಲಿ ಬಿಎಸ್ಸೆನ್ನೆಲ್ ನೆಲದಡಿಯಲ್ಲಿ ಅಳವಡಿಸಿದ್ದ ಸಂಪರ್ಕ ತಂತಿಗಳು ತುಂಡಾಗಿವೆ. ಇದರಿಂದಾಗಿ ನೆಕ್ಕಿಲಾಡಿಯ ಹಲವು ಗ್ರಾಮಸ್ಥರ ಸ್ಥಿರ ದೂರವಾಣಿಗಳು ನಿಷ್ಕ್ರಿಯಗೊಂಡಿತ್ತು. ಈ ಬಗ್ಗೆ ಬಿಎಸ್ಸೆನ್ನೆಲ್ ಗ್ರಾಹಕ ಸೇವಾ ವಿಭಾಗಕ್ಕೆ ಗ್ರಾಹಕರು ದೂರು ನೀಡಿ ಒಂದು ವಾರ ಕಳೆದರೂ ಸಮಸ್ಯೆ ಪರಿಹಾರವಾಗಿಲ್ಲ. ನಿಷ್ಕ್ರೀಯ ಗೊಂಡ ದೂರವಾಣಿ ಸಂಪರ್ಕಗಳು ಇನ್ನೂ ಸುಸ್ಥಿತಿಗೆ ಮರಳಿಲ್ಲ ಎಂದು ಗ್ರಾಹಕರು ಇಲಾಖೆಯ ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ.
ಬಿಎಸ್ಸೆನ್ನೆಲ್ ವಿರುದ್ಧ ಆರೋಪ:
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ತ್ವರಿತವಾಗಿ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಈ ಸಂದರ್ಭದಲ್ಲಿ ಟೆಲಿಕಾಂ ಇಲಾಖೆಯವರಿಗೆ ಸೂಚನೆ ನೀಡಲಾಗಿತ್ತು. ಕೇಬಲ್ ಅಳವಡಿಸಿದ ಪ್ರದೇಶದ ನಕ್ಷೆಯನ್ನು ಕೋರಲಾಗಿತ್ತು. ಆದರೆ ಬಿಎಸ್ಸೆನ್ನೆಲ್‌ನ ಅಧಿಕಾರಿಗಳು ಗ್ರಾಪಂನ ಸೂಚನೆಯನ್ನು ಸರಿಯಾಗಿ ಪಾಲಿಸಿಲ್ಲ ಮಾಹಿತಿಯನ್ನೂ ನೀಡಿಲ್ಲ ಇದರಿಂದಾಗಿ ಸಮಸ್ಯೆ ಉಂಟಾಗಿದೆ ಎನ್ನುತ್ತಾರೆ ನೆಕ್ಕಿಲಾಡಿ ಗ್ರಾಪಂ ಉಪಾಧ್ಯಕ್ಷ ಅಸ್ಗರ್ ಅಲಿ. ಅಂತರ್ಗತ ಕೇಬಲ್ ಅಳವಡಿಸುವ ಸಂದರ್ಭದಲ್ಲಿ ಭೂಮಿಯ 5 ಅಡಿ ಕೆಳಗೆ ಹೊಂಡತೋಡಿ ಅಳವಡಿಸಬೇಕು. ಕೇಬಲ್ ಎಲ್ಲಿ ಅಳವಡಿಸಲಾಗಿದೆ ಆ ಪ್ರದೇಶದಲ್ಲಿ ಸೂಚನಾ ಫಲಕ ಅಳವಡಿಸಬೇಕು ಮತ್ತು ಕೇಬಲ್ ಅಳವಡಿಸಿದ ಪ್ರದೇಶಗಳ ನಕ್ಷೆಯನ್ನು ಗ್ರಾಪಂಗೆ ನೀಡಬೇಕಾಗಿತ್ತು. ಆದರೆ ಇದ್ಯಾವ ನಿಯಮವನ್ನು ಬಿಎಸ್ಸೆನ್ನೆಲ್‌ನ ಅಧಿಕಾರಿಗಳು ಪಾಲಿಸಿಲ್ಲ. ಕೇವಲ 2 ಅಡಿ ಆಳದ ಗುಂಡಿ ತೋಡಿ ಕೇಬಲ್ ಅಳವಡಿಸಿದ್ದಾರೆ. ಕೆಲವು ಕಡೆ ಈ ಕೇಬಲ್ ಮೇಲಕ್ಕೆ ಎದ್ದು ಕಾಣುತ್ತಿವೆ. ಆ ಕಾರಣದಿಂದ ಕುಡಿಯುವ ನೀರಿನ ಪೈಪ್ ಅಳವಡಿಸುವ ಸಂದರ್ಭದಲ್ಲಿ ಕೆಲವು ಕಡೆ ಕೇಬಲ್‌ಗಳಿಗೆ ಹಾನಿಯಾಗಿರುವ ಕಾರಣದಿಂದ ಗ್ರಾಹಕರಿಗೆ ತೊಂದರೆಯಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ಬಿಎಸ್ಸೆನ್ನೆಲ್ ಗಮನಹರಿಸಬೇಕಾಗಿದೆ. ಸಮಸ್ಯೆ ಪರಿಹಾರ ಮಾಡುವ ಬದಲು ಬಿಎಸ್ಸೆನ್ನೆಲ್‌ನ ಅಧಿಕಾರಿಗಳು 2 ಲಕ್ಷ ರೂ. ಪರಿಹಾರ ನೀಡಬೇಕೆಂದು ಗ್ರಾಪಂಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಅಸ್ಗರ್ ಅಲಿ ತಿಳಿಸಿದ್ದಾರೆ.
‘ನಾನು ಬಿಎಸ್ಸೆನ್ನೆಲ್ ಬಳಕೆದಾರ. ಕಳೆದ ಹತ್ತು ದಿನಗಳಿಂದ ನನ್ನ ಉದ್ಯಮದ ದೂರವಾಣಿ ಸಂಪರ್ಕ ಸ್ಥಗಿತಗೊಂಡಿದೆ. ಈ ಬಗ್ಗೆ ದೂರವಾಣಿ ಇಲಾಖೆಗೆ ದೂರು ನೀಡಿದ್ದು, ದೂರು ದಾಖಲಾಗಿದೆ. ಸರಿಪಡಿಸುವ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೂ ಸಮಸ್ಯೆ ಬಗೆಹರಿದಿಲ್ಲ. ಇದರಿಂದ ನನ್ನ ಉದ್ಯಮಕ್ಕೂ ಸಮಸ್ಯೆಯಾಗಿದೆ’ ಎಂದು ನೆಕ್ಕಿಲಾಡಿಯ ದೂರವಾಣಿ ಬಳಕೆದಾರ ಕೆ.ಪಿ.ಸತ್ಯಂ ಪತ್ರಿಕೆಗೆ ತಿಳಿಸಿದ್ದಾರೆ.







