ಪ್ರಧಾನಿ ಕಾರ್ಯಾಲಯದಲ್ಲಿ ಸ್ವಚ್ಛತಾ ಕಾರ್ಯಾಚರಣೆ : ಹತ್ತು ಸಾವಿರ ಕಡತಗಳು ಹೊರಗೆ

ಹೊಸದಿಲ್ಲಿ, ಮಾ. 17 : ಸ್ವಚ್ಛ ಭಾರತ ಅಭಿಯಾನದಡಿ ಕೈಗೊಂಡಿದ್ದ ಪ್ರಧಾನ ಮಂತ್ರಿ ಕಾರ್ಯಾಲಯದ ೧೫ ದಿನಗಳ ವಿಶೇಷ ಸ್ವಚ್ಛತಾ ಕಾರ್ಯಾಚರಣೆ ಬುಧವಾರ ಮುಕ್ತಾಯಗೊಂಡಿದೆ. ಈ ಸಂದರ್ಭದಲ್ಲಿ 10,000 ಸಾವಿರಕ್ಕೂ ಹೆಚ್ಚು ಕಡತಗಳನ್ನು ಹೊರಗೆ ಹಾಕಿ, ಸಂಗ್ರಹಿಸಿಡುವ ಮೌಲ್ಯದ 1000 ಕಡತಗಳನ್ನು ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾಗೆ ವರ್ಗಾಯಿಸಲಾಗಿದೆ.
ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ ನ್ರುಪೇಂದ್ರ ಮಿಶ್ರಾ ಅವರ ನೇತ್ರತ್ವದಲ್ಲಿ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಹಾಗು ಸಿಬ್ಬಂದಿ ಸ್ವಯಂಪ್ರೇರಿತರಾಗಿ , ಸಕ್ರಿಯವಾಗಿ ಭಾಗವಹಿಸುವ ಮೂಲಕ ಕಾರ್ಯಾಲಯದ ಪಶ್ಚಿಮ ದ್ವಾರದ ಎದುರಿನ ಲಾನ್ ಗಳ ಸ್ವಚ್ಚತೆ ಹಾಗು ಸುಂದರೀಕರಣ, ಗುಜರಿ ಹಾಗು ಅನಗತ್ಯ ವಸ್ತುಗಳನ್ನು ತೆಗೆದು ಹಾಕುವುದು ಮತ್ತು ಇ ತ್ಯಾಜ್ಯಗಳ ವಿಲೇವಾರಿಯೂ ನಡೆಯಿತು ಎಂದು ಪ್ರಕಟಣೆ ತಿಳಿಸಿದೆ.
ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ ಅವರು ಪಿ ಎಂ ಒ ದ ಪರಿಶೀಲನೆ ನಡೆಸಿ ಸ್ವಚ್ಛತೆ ಉಳಿಸಿಕೊಳ್ಳುವ ಮೂಲಕ ಕೆಲಸದ ಗುಣಮಟ್ಟ ಹೆಚ್ಚಿಸಲು ಸೂಚಿಸಿದ್ದರು. ಅವರು ಪ್ರಧಾನಿಯಾದ ಬಳಿಕ ಈವರೆಗೆ ಮೂರು ಬಾರಿ ಇಂತಹ ಕಾರ್ಯಾಚರಣೆ ನಡೆದಿದ್ದು ಒಂದು ಲಕ್ಷಕ್ಕೂ ಹೆಚ್ಚು ಕಡತಗಳನ್ನು ಅಲ್ಲಿಂದ ತೆಗೆದು ಹಾಕಲಾಗಿದೆ.





