ಸೌದಿ ಮೊಬೈಲ್ ಮಾರಾಟ ಮಳಿಗೆಗಳ ಮೇಲೆ ತಪಾಸಣಾ ದಾಳಿ
6 ತಿಂಗಳಲ್ಲಿ ಸಂಪೂರ್ಣ ಸೌದೀಕರಣ ಗುರಿ

ರಿಯಾದ್, ಮಾ. 17: ಕಾರ್ಮಿಕ ಸಚಿವಾಲಯದ ತಪಾಸಣಾ ತಂಡಗಳು ಭದ್ರತಾ ಪಡೆಗಳ ನೆರವಿನೊಂದಿಗೆ ಸೌದಿ ಅರೇಬಿಯದಾದ್ಯಂತವಿರುವ ಮೊಬೈಲ್ ಫೋನ್ ಮಾರಾಟ ಮಳಿಗೆಗಳು ಮತ್ತು ದುರಸ್ತಿ ಅಂಗಡಿಗಳ ಮೇಲೆ ದಾಳಿಗಳನ್ನು ಆರಂಭಿಸಿವೆ.
ಮೊಬೈಲ್ ಫೋನ್‌ಗಳ ಮಾರಾಟ ಮತ್ತು ನಿರ್ವಹಣೆ ಕ್ಷೇತ್ರವನ್ನು ಇನ್ನು ಆರು ತಿಂಗಳಲ್ಲಿ ಸಂಪೂರ್ಣವಾಗಿ ಸೌದೀಕರಣ ಮಾಡುವುದಕ್ಕೆ ಪೂರ್ವಭಾವಿಯಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ತಪಸಣಾ ತಂಡಗಳು ಸಾವಿರಾರು ಅಂಗಡಿಗಳಲ್ಲಿ ಪರಿಶೀಲನೆ ನಡೆಸಿದವು ಹಾಗೂ ಹಲವಾರು ಉಲ್ಲಂಘನೆಗಳನ್ನು ಪತ್ತೆಹಚ್ಚಿದವು. ಕಾನೂನು ಮತ್ತು ವಾಸ್ತವ್ಯ ನಿಯಮಗಳನ್ನು ಮೀರಿದ ಅಂಗಡಿಗಳು ಮತ್ತು ಕೆಲಸಗಾರರ ವಿರುದ್ಧ ದಂಡನಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.
ಅಂಗಡಿಗಳನ್ನು ಹಂತ ಹಂತವಾಗಿ ಸಂಪೂರ್ಣವಾಗಿ ಸೌದೀಕರಣ ಮಾಡಬೇಕು ಎನ್ನುವ ಸಚಿವಾಲಯದ ನಿರ್ಧಾರದ ಬಗ್ಗೆ ಮಾಲೀಕರಿಗೆ ಅಧಿಕೃತವಾಗಿ ಮಾಹಿತಿ ನೀಡುವುದು ತಪಾಸಣಾ ಭೇಟಿಗಳ ಪ್ರಮುಖ ಉದ್ದೇಶವಾಗಿದೆ.
ತಪಾಸಣಾ ತಂಡಗಳು ಮಕ್ಕಾ, ಮದೀನಾ, ಆಸಿರ್ ಮತ್ತು ಈಸ್ಟರ್ನ್ ಪ್ರಾವಿನ್ಸ್ ರಾಜ್ಯಗಳಲ್ಲಿರುವ 900ಕ್ಕೂ ಅಧಿಕ ಮೊಬೈಲ್ ಫೋನ್ ಮಳಿಗೆಗಳಿಗೆ ಭೇಟಿ ನೀಡಿದವು.
ದೇಶದ ಉತ್ತರದಲ್ಲಿರುವ ಅಲ್-ಜೌಫ್ ವಲಯದಲ್ಲಿ 306 ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು ಹಾಗೂ 165ಕ್ಕೂ ಅಧಿಕ ಅಂಗಡಿಗಳಿಗೆ ಎಚ್ಚರಿಕೆ ನೋಟಿಸ್‌ಗಳನ್ನು ನೀಡಲಾಯಿತು. ಈ ದಾಳಿಗಳ ವೇಳೆ, ಒಟ್ಟು 28 ಉಲ್ಲಂಘನೆಗಳನ್ನು ಪತ್ತೆಹಚ್ಚಲಾಯಿತು.
ಸಕಾಕ, ದೌಮತ್ ಅಲ್-ಜಂದಲ್, ಕುರಯ್ಯತ್ ಮತ್ತು ತಬಾರ್ಜಲ್ ನಗರಗಳಲ್ಲಿ ತಂಡಗಳು ತಪಾಸಣೆ ನಡೆಸಿದವು ಎಂದು ಸಚಿವಾಲಯದ ಅಲ್-ಜೌಫ್‌ನಲ್ಲಿರುವ ಶಾಖೆಯ ಮಹಾನಿರ್ದೇಶಕ ಅಬ್ದುಲಝೀಝ್ ಅಲ್-ರುವೈಲಿ ತಿಳಿಸಿದರು.
‘‘ಯಾವುದೇ ಕ್ಷೇತ್ರದಲ್ಲಿ ಕಾರ್ಮಿಕ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ದಂಡನಾ ಕ್ರಮಗಳನ್ನು ತೆಗೆದುಕೊಳ್ಳಲು ಸಚಿವಾಲಯದ ಶಾಖೆ ಉತ್ಸುಕವಾಗಿದೆ. ತಪಾಸಣೆಗಳು ಜೂನ್ 6ರವರೆಗೆ ಮುಂದುವರಿಯುವುದು. ಮೊಬೈಲ್ ಫೋನ್ ಮಾರಾಟ ಮತ್ತು ನಿರ್ವಹಣೆ ಕ್ಷೇತ್ರದಲ್ಲಿ 50 ಶೇಕಡ ಸೌದೀಕರಣ ಸಾಧಿಸಲು ಜೂನ್ 6 ಕೊನೆಯ ದಿನಾಂಕವಾಗಿದೆ’’ ಎಂದರು.
ಸೌದಿಯ ಪುರುಷ ಮತ್ತು ಮಹಿಳಾ ಉದ್ಯೋಗಾಕಾಂಕ್ಷಿಗಳಿಗೆ ಹೆಚ್ಚಿನ ಸಂಖ್ಯೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಚಿವಾಲಯದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.
ಮೊಬೈಲ್ ಫೋನ್‌ಗಳು ಮತ್ತು ಅವುಗಳ ಬಿಡಿ ಭಾಗಗಳ ಎಲ್ಲ ಮಾರಾಟ ಮತ್ತು ನಿರ್ವಹಣಾ ಮಳಿಗೆಗಳನ್ನು ಆರು ತಿಂಗಳಲ್ಲಿ ಸೌದೀಕರಣಗೊಳಿಸಬೇಕು ಎಂಬ ಆದೇಶವನ್ನು ಕಳೆದ ವಾರ ಕಾರ್ಮಿಕ ಸಚಿವ ಮುಫ್ರೆಝ್ ಅಲ್-ಹಕ್ಬಾನಿ ಹೊರಡಿಸಿರುವುದನ್ನು ಸ್ಮರಿಸಬಹುದಾಗಿದೆ.







