ನಾನ್-ಸಿಆರ್‌ಝೆಡ್‌ನ 4 ಬ್ಲಾಕ್‌ಗಳಿಂದ ಮರಳು ಪೂರೈಕೆಗೆ ಅವಕಾಶ! ವೈಯಕ್ತಿಕ ಮನೆ ಕಟ್ಟುವವರಿಗೆ ಪ್ರಥಮ ಆದ್ಯತೆ:

ಮಂಗಳೂರು, ಮಾ. 17: ದ.ಕ. ಜಿಲ್ಲೆಯಲ್ಲಿ ನಾನ್ ಸಿಆರ್‌ಝೆಡ್ ವ್ಯಾಪ್ತಿಯ ನಾಲ್ಕು ಮರಳು ದಿಣ್ಣೆಗಳಿಂದ (ಬ್ಲಾಕ್) ಟೆಂಡರು ಸಲ್ಲಿಸಿರುವ ಗುತ್ತಿಗೆದಾರರಿಗೆ ಮರಳು ಸಾಗಾಟಕ್ಕೆ ಅವಕಾಶ ನೀಡಲಾಗಿದ್ದು, ಪ್ರಮುಖವಾಗಿ ವೈಯಕ್ತಿಕ ಮನೆ ಕಟ್ಟುವವ ದ.ಕ. ಜಿಲ್ಲೆಯಲ್ಲಿಯವರಿಗೆ ಮರಳು ಪೂರೈಕೆ ಮಾಡಲು ಆದ್ಯತೆ ನೀಡುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದ್ದಾರೆ.
ಮರಳು ಸಾಗಾಟ ಸಂಬಂಧ ಬಿಡ್ಡುದಾರರ ಪ್ರಿಬಿಡ್ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಸಜಿಪಪಡುವಿನ 2 ಬ್ಲಾಕ್‌ಗಳು, ಬರಿಮಾರು ಹಾಗೂ ಸಜಿಪ ಮುನ್ನೂರಿನ ತಲಾ ಒಂದು ಬ್ಲಾಕ್‌ಗಳಿಂದ ಸ್ಟಾಕ್ ಯಾರ್ಡ್‌ಗೆ ಮರಳನ್ನು ಶೇಖರಿಸಿ ಅಲ್ಲಿಂದ ಜಿಲ್ಲೆಯಲ್ಲಿ ಮರಳು ಸಾಗಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಂದು ಕ್ಯೂಬಿಕ್ ಮೀಟರ್ ಅಳತೆಯ ಮರಳಿಗೆ 403 ರೂ. ಹಾಗೂ ರಾಜಧನ ಸೇರಿ ಒಟ್ಟು 625 ರೂ. (ಸಾಗಾಟ ವೆಚ್ಚವನ್ನು ಹೊರತುಪಡಿಸಿ) ಗಳನ್ನು ನಿಗದಿಪಡಿಸಲಾಗಿದೆ. (ಒಂದು ಕ್ಯೂಬಿಕ್ ಮೀಟರ್ ಅಂದರೆ 1.7 ಟನ್) ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ 19 ಬ್ಲಾಕ್‌ಗಳನ್ನು ಗುರುತಿಸಾಲಾಗಿದ್ದು, ಎನ್‌ಐಟಿಕೆಯ ತಜ್ಞರ ಅಧ್ಯಯನ ಮೇರೆಗೆ ಆ ಬ್ಲಾಕ್‌ಗಳನ್ನು 16ಕ್ಕೆ ಇಳಿಕೆ ಮಾಡಲಾಗಿದೆ. ಜನವರಿ 15ರಿಂದ ಅಲ್ಲಿ ಮರಳು ಸಾಗಾಟ ನಿಷೇಧಿಸಲಾಗಿದ್ದು, ಕೇಂದ್ರದ ಪರಿಸರ ಇಲಾಖೆ ಹಾಗೂ ಎನ್‌ಜಿಟಿಯಿಂದ ಅನುಮತಿ ದೊರಕಿದ ಬಳಿಕವಷ್ಟೆ ಆ ಬ್ಲಾಕ್‌ಗಳಲ್ಲಿ ಮರಳು ಸಾಗಾಟಕ್ಕೆ ಅವಕಾಶ ದೊರೆಯಲಿದೆ. ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ನಡೆಯುವ ಈ ಪ್ರಕ್ರಿಯೆ ಮರಳುಗಾರಿಕೆಯಲ್ಲ. ಬದಲಾಗಿ ಮೀನುಗಾರಿಕೆಗೆ ಮತ್ತು ನಾಡ ದೋಣಿಗಳು ಮುಕ್ತವಾಗಿ ಸಂಚರಿಸುವ ನಿಟ್ಟಿನಲ್ಲಿ ಮರಳು ದಿಣ್ಣೆಗಳನು ತೆರವುಗೊಳಿಸುವುದಾಗಿದೆ. ಉಳಿದಂತೆ ನಾನ್ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ 38 ಬ್ಲಾಕ್‌ಗಳಲ್ಲಿ ಈ ಹಿಂದೆ 23 ಬ್ಲಾಕ್‌ಗಳಿಗೆ ಟೆಂಡರ್ ಕರೆಯಲಾಗಿತ್ತು. 11 ಮಂದಿ ಟೆಂಡರ್‌ನಲ್ಲಿ ಭಾಗವಹಿಸಿದ್ದು, ಅಂತಿಮವಾಗಿ ಐದು ಬ್ಲಾಕ್‌ಗಳನ್ನು ಗುರುತಿಸಲಾಗಿತ್ತು. ಅದರಲ್ಲಿ ಒಂದನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಇದೀಗ ನಾಲ್ಕು ಬ್ಲಾಕ್‌ಗಳಲ್ಲಿ ಮರಳುಗಾರಿಕೆಗೆ ಅವಕಾಶವಿದೆ.
ನಾನ್ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಈ ಹಿಂದಿನ ಟೆಂಡರ್‌ನಲ್ಲಿದ್ದ ಕೆಲವೊಂದು ನಿಯಮಗಳನ್ನು ಸರಳಗೊಳಿಸಿ 30 ಬ್ಲಾಕ್‌ಗಳಿಗೆ ಶಾರ್ಟ್ ಟೆಂಡರ್ ಕರೆಯಲಾಗಿದ್ದು, 23 ಕೊನೆಯ ದಿನವಾಗಿರುತ್ತದೆ ಎಂದು ಅವರು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಪಿಡಬ್ಲುಡಿ ಕಾರ್ಯನಿರ್ವಾಹಕ ಇಂಜಿನಯರ್ ಗಣೇಶ್ ಅರಳೀಕಟ್ಟೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ನಾಗೇಂದ್ರ ಉಪಸ್ಥಿತರಿದ್ದರು.
30 ಕಡೆಗಳಲ್ಲಿ ಸಿಸಿ ಕ್ಯಾಮಾರಾ
ಅಕ್ರಮ ಮರಳು ಸಾಗಾಟವನ್ನು ನಿಯಂತ್ರಣ ಹಾಗೂ ನಿಷೇಧಿಸುವ ನಿಟ್ಟಿನಲ್ಲಿ ಜಿಲ್ಲೆಯ ಚೆಕ್‌ಪೋಸ್ಟ್‌ಗಳು ಸೇರಿದಂತೆ 35 ಲಕ್ಷ ರೂ.ಗಳಲ್ಲಿ 30 ಕಡೆಗಳಲ್ಲಿ ಸಿಸಿ ಕ್ಯಾಮಾರಾ ಅಳವಡಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಪ್ರಕ್ರಿಯೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದರು.





