ಮಂಗಳೂರು : ಸಂಚಾರಿ ಪೊಲೀಸರ ಕರ್ತವ್ಯ ಪಾಲನೆ ಬಗ್ಗೆ ಆಯುಕ್ತರಿಗೆ ಮನವಿ
ಮಂಗಳೂರು, ಮಾ. 17: ನಗರದಲ್ಲಿ ಸಂಚಾರ ನಿರ್ವಹಣೆಯಲ್ಲಿರುವ ಪೊಲೀಸರು (ಕೆಲವರು) ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿದ ಸಂದರ್ಭ ಕರ್ತವ್ಯ ಪಾಲನೆಯಲ್ಲಿ ನಿರ್ಲಕ್ಷ ವಹಿಸುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಂಗಳೂರು ಪತ್ರಕರ್ತರ ಗುಂಪೊಂದು ಇಂದು ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಹಾಗೂ ಸಹಾಯಕ ಪೊಲೀಸ್ ಆಯುಕ್ತ (ಸಂಚಾರ) ಉದಯ ನಾಯಕ್ ಅವರಿಗೆ ಮನವಿ ಸಲ್ಲಿಸಿತು.
ಸಂಚಾರ ಪೊಲೀಸ್ ಸಿಬ್ಬಂದಿಗಳ ಕೊರತೆಯ ಹೊರತಾಗಿಯೂ ನಗರದಲ್ಲಿ ಸಂಚಾರ ಸುವ್ಯವಸ್ಥೆಯನ್ನು ಸುಗಮವಾಗಿಸುವಲ್ಲಿ ಪೊಲೀಸರು ಬಹಳಷ್ಟು ಶ್ರಮ ವಹಿಸುತ್ತಿದ್ದರೂ ಕೆಲವೊಂದು ಸಿಬ್ಬಂದಿ ಕರ್ತವ್ಯದ ವೇಳೆ ತಮ್ಮ ಕಣ್ಣೆದುರೇ ಅಪಘಾತ, ಅಹಿತಕರ ಘಟನೆಗಳು ನಡೆದರೂ ಮೂಕ ಪ್ರೇಕ್ಷಕರಾಗಿರುತ್ತಾರೆ. ಕನಿಷ್ಠ ಸೌಜನ್ಯವನ್ನೂ ಪ್ರದರ್ಶಿಸಲು ಮುಂದಾಗದಿರುವುದರಿಂದ ಸಾರ್ವಜನಿಕರು ಸಂಚಾರ ವ್ಯವಸ್ಥೆಯನ್ನೇ ದೂರುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಬುಧವಾರ (ಮಾರ್ಚ್ 16)ದಂದು ಸಂಜೆ 3.30ರ ಸುಮಾರಿಗೆ ಸುದ್ದಿಗಾಗಿ ಪತ್ರಕರ್ತೆಯೊಬ್ಬರು ತಮ್ಮ ದ್ವಿಚಕ್ರ ವಾಹನದಲ್ಲಿ ಜ್ಯೋತಿ (ಅಂಬೇಡ್ಕರ್ ವೃತ್ತ) ಬಳಿಯಿಂದ ಸಾಗುತ್ತಿರುವಾಗ ಅಲ್ಲಿ ಸಿಗ್ನಲ್ ಬಳಿ ರಿಕ್ಷಾವೊಂದು ಆಕೆಯ ವಾಹನಕ್ಕೆ ತಾಗಿದ ಪರಿಣಾಮ ಆಕೆ ದ್ವಿಚಕ್ರವಾಹನದೊಂದಿಗೆ ಬಿದ್ದು ಸಣ್ಣ ಪುಟ್ಟ ಗಾಯಕ್ಕೊಳಗಾಗಿದ್ದರು. ಈ ಸಂದರ್ಭ ರಿಕ್ಷಾ ಚಾಲಕ ನೆಲಕ್ಕುರುಳಿದ ಯುವತಿಯ ಬಗ್ಗೆ ಗಮನ ಕೊಡದೆ ಬದಲಾಗಿ ಆಕೆಗೆ ಬೈಗುಳದ ಮಾತುಗಳನ್ನಾಡಿ ಅಲ್ಲಿಂದ ತೆರಳಿದ್ದ. ಇಷ್ಟೆಲ್ಲಾ ಘಟನೆ ನಡೆಯುತ್ತಿರುವಾಗ ಅಲ್ಲೇ ಇದ್ದ ಸಂಚಾರ ಪೊಲೀಸ್ ಸಿಬ್ಬಂದಿ ಕೂಡಾ ಕನಿಷ್ಠ ಸೌಜನ್ಯಕ್ಕಾದರೂ ಯುವತಿಯ ವಾಹನ ಅಡ್ಡ ಬಿದ್ದಲ್ಲಿ ಬಂದು ಮಾತನಾಡುವ ಕೆಲಸ ಮಾಡಿಲ್ಲ. ಅಲ್ಲೇ ಇದ್ದ ಯುವಕನೊಬ್ಬ ಬಿದ್ದ ದ್ವಿಚಕ್ರ ವಾಹನವನ್ನು ಎತ್ತಿ ಯುವತಿಗೆ ಸಹಕರಿಸಿದ್ದಾನೆ. ಇಂತಹ ಘಟನೆಗಳು ನಗರದಲ್ಲಿ ಸಾಕಷ್ಟು ಸಂಭವಿಸುತ್ತಿರುತ್ತವೆ. ಇಂತಹ ಸಂದರ್ಭಗಳಲ್ಲಿ ಕರ್ತವ್ಯದಲ್ಲಿರುವ ಸಂಚಾರ ಪೊಲೀಸರು ಘಟನೆಯ ವಿವರ ಪಡೆದು ವಾಹನಗಳ ಸಂಖ್ಯೆಗಳನ್ನು ನಮೂದಿಸಿಕೊಂಡು ಕ್ರಮ ಕೈಗೊಳ್ಳುವುದು ಅಥವಾ ಪರಸ್ಪರ ಮಾತುಕತೆಯ ಮೂಲಕ ಧೈರ್ಯ ತುಂಬುವ ಕೆಲಸವನ್ನಾದರೂ ಮಾಡಬೇಕು. ಈ ಬಗ್ಗೆ ಸಿಬ್ಬಂದಿಗೆ ತರಬೇತಿಯನ್ನು ನೀಡುವ ಕ್ರಮ ಕೈಗೊಳ್ಳಬೇಕು ಎಂದು ಪತ್ರಕರ್ತ ಮಿತ್ರರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮನವಿಗೆ ತಕ್ಷಣ ಪ್ರತಿಕ್ರಿಯಿಸಿದ ಆಯುಕ್ತ ಎಂ. ಚಂದ್ರಶೇಖರ್, ನಿರ್ದಿಷ್ಟ ಪ್ರಕರಣದ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಲ್ಲದೆ, ಸಿಬ್ಬಂದಿಗೆ ತರಬೇತಿಯನ್ನು ನೀಡುವ ಭರವಸೆಯನ್ನೂ ನೀಡಿದರು.
ಮನವಿ ಸ್ವೀಕರಿಸಿರುವ ಎಸಿಪಿ ಉದಯ ನಾಯಕ್ ಕೂಡಾ ಪೂರಕವಾಗಿ ಸ್ಪಂದಿಸಿದ್ದು, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.





