ನೇಪಾಲದಿಂದ ಭಾರತಕ್ಕೆ ಕಳ್ಳಸಾಗಣೆ - ಶತಕೋಟಿ ರೂ. ಮೌಲ್ಯದ 100 ಕೆ.ಜಿ. ಚರಸ್ ವಶ: ಇಬ್ಬರ ಬಂಧನ

ಸೊನೌಲಿ (ಮಹಾರಾಜ್‌ಗಂಜ್) ಮಾರ್ಚ್.17: ನೇಪಾಲದಿಂದ ಭಾರತಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ನೂರು ಕೆ.ಜಿ ಚರಸ್(ಹಶಿಸ್)ನ್ನು ನೇಪಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಪ್ತಿಯಾದ ಚರಸ್‌ನ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು ಒಂದು ಶತಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ನೇಪಾಲ ಪೊಲೀಸರು ಮಕಾವ ಪುರದಲ್ಲಿ ಜೀಪೊಂದನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಅದರಲ್ಲಿ ಅಡಗಿಸಿಡಲಾಗಿದ್ದ ಒಂದು ಕ್ವಿಂಟಲ್ ಚರಸ್‌ನ್ನು ಪತ್ತೆಹಚ್ಚಿದ್ದರು. ಕಳ್ಳಸಾಗಾಟದ ಮಾದಕವಸ್ತು ಮತ್ತು ಆರೋಪಿಗಳಿಬ್ಬರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಜೀಪು ಚಾಲಕ ಸಹಿತ ನೇಪಾಲದ ಶಾಲೆಯೊಂದರ ಮ್ಯಾನೇಜರ್‌ನನ್ನು ಮಾದಕವಸ್ತು ಕಳ್ಳಸಾಗಣೆ ಆರೋಪದಲ್ಲಿ ಬಂಧಿಸಲಾಗಿದೆ ಎಂದು ನೇಪಾಲ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ತಿಳಿಸಿರುವ ಪ್ರಕಾರ ನೇಪಾಲದ ಮಕಾವಪುರದಿಂದ ಉತ್ತರಪ್ರದೇಶದ ಮಹಾರಾಜಗಂಜ್‌ನ ಸೊನೌಲಿಗೆ ಜೀಪು ಹೊರಟಿತ್ತು. ಅಲ್ಲಿಗೆ ತಲುಪುವ ಮೊದಲೇ ಆರೋಪಿ ಮತ್ತು ಚರಸ್‌ನ್ನು ವಶಪಡಿಸಿಕೊಳ್ಳುವಲ್ಲಿ ನೇಪಾಲ ಪೊಲೀಸರು ಯಶಸ್ವಿಯಾಗಿದ್ದಾರೆಂದು ತಿಳಿದು ಬಂದಿದೆ. ನೇಪಾಲ ಪೊಲೀಸರಿಗೆ ಜೀಪ್‌ನಲ್ಲಿ ಉತ್ತರ ಪ್ರದೇಶಕ್ಕೆ ಚರಸ್ ಕಳ್ಳಸಾಗಾಟ ನಡೆಸಲಾಗುತ್ತಿದೆಯೆಂದು ಖಚಿತ ಮಾಹಿತಿ ಸಿಕ್ಕಿತ್ತು. ಸಂದೇಹಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಜೀಪೊಂದನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಪೊಲೀಸರೇ ಕೆಲವು ಕ್ಷಣ ಗರಬಡಿದು ನಿಂತಿದ್ದರು. ಭಾರೀ ಪ್ರಮಾಣದಲ್ಲಿ ಭಾರತಕ್ಕೆ ಚರಸ್ ಕಳ್ಳಸಾಗಣೆ ನಡೆಯುತ್ತಿದೆ ಎಂದು ಅವರು ಊಹಿಸಿರಲಿಲ್ಲ. ಪೊಲೀಸರು ಜೀಪ್‌ನ ಮೇಲ್ಭಾಗದ ಕ್ಯಾಬಿನ್‌ನಲ್ಲಿ ಚರಸ್‌ನ ನೂರು ಪ್ಯಾಕೆಟ್‌ಗಳನ್ನು ಅಡಗಿಸಿಡಲಾಗಿತ್ತೆಂದು ತಿಳಿಸಿದ್ದಾರೆ.





