ಮೊದಲು ಗುಂಡು ಹಾರಿಸಿದರು, ನಂತರ ತಪ್ಪಾಯಿತು ಎಂದರು!
ಅಮಾಯಕ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿ!

ಮವೂ, ಮಾರ್ಚ್.17: ಮಾನಿಕರ್‌ಪುರ ಹುದುವಾದ ಲಾಲಾ ಎಂಬಲ್ಲಿ ಕಳೆದ ಮಂಗಳವಾರದಂದು ಬೈಕ್ ಚಲಾಯಿಸಿ ಹೋಗುತ್ತಿದ್ದ ಯುವಕ ಶಫೀಕ್ ಎಂಬವರ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು, ಆ ನಂತರ ತಾವು ಸಾಯಿಸಲು ಉದ್ದೇಶಿಸಿದ್ದ ಯುವಕ ಆತನಲ್ಲ ಎಂದು ಮನವರಿಕೆಯಾದಾಗ ಅವರು ಶಫೀಕ್‌ಗೆ ಸಾರಿ ಹೇಳಿ ಪರಾರಿಯಾದ ಘಟನೆ ವರದಿಯಾಗಿದೆ.
ಶಫೀಕ್‌ನ ಭುಜಕ್ಕೆ ಗುಂಡು ತಾಗಿದ್ದು. ನೋವಿನಿಂದ ಒದ್ದಾಡುತ್ತಿದ್ದ ಯುವಕ ಸ್ವಯಂ ತನ್ನ ಬೈಕ್ ಚಲಾಯಿಸಿ ಕೊತ್ವಾಲ್ ಎಂಬಲ್ಲಿಗೆ ತಲುಪಿದ್ದರು. ಪೊಲೀಸರು ಅವನನ್ನು ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಿಎಚ್‌ಯು ಟೀಮ್ ಸೆಂಟರ್‌ನ ವೈದ್ಯರು ಭುಜದಿಂದ ಅವನಿಗೆ ತಾಗಿದ್ದ ಗುಂಡನ್ನು ಹೊರತೆಗೆದಿದ್ದಾರೆ. ಗಾಯಾಳು ಯುವಕ ಅಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ನಾಲ್ವರು ಅಜ್ಞಾತ ವ್ಯಕ್ತಿಗಳ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಮಂಗಳವಾರದಂದು ಭಟೌಲಿ ನಿವಾಸಿ ಆಟೊ ಏಜೆನ್ಸಿ ಏಜೆಂಟ್ ಮುಹಮ್ಮದ್ ಶಫೀಕ್(35) ಥಾನಿದಾಸ್ ತಿರುವಿನಲ್ಲಿ ಮಾಂಸ ಖರೀದಿಸಲೆಂದು ಬೈಕ್‌ನಲ್ಲಿ ಹೋಗುತ್ತಿದ್ದಾಗ ನಾಲ್ವರು ಬೈಕ್ ನಿಲ್ಲಿಸಲು ಹೇಳಿದ್ದರು. ಶಫೀಕ್ ನಿಲ್ಲಿಸಿದಾಗ ಅವರ ಮೇಲೆ ಫೈರಿಂಗ್ ಆರಂಭಿಸಿದ್ದರು. ಗುಂಡು ಶಫೀಕ್‌ನ ಭುಜಕ್ಕೆ ತಗಲಿತ್ತು. ಆನಂತರವೇ ದುಷ್ಕರ್ಮಿಗಳಿಗೆ ತಮಗೆ ವ್ಯಕ್ತಿ ಬದಲಾಗಿರುವುದು ತಿಳಿದಿತ್ತು.





