ಪುತ್ತೂರು: ಪೆರಾಬೆ ಕತ್ತಲು ಮುಕ್ತ ಗ್ರಾಮ ಯೋಜನೆ, ಸೋಲಾರ್ ಅಳವಡಿಕೆಯಲ್ಲಿ ಅವ್ಯವಹಾರ ನಡೆದಿಲ್ಲ- ಯಮುನಾ ಎಸ್ ರೈ
ಪುತ್ತೂರು: ಪೆರಾಬೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪಂಚಾಯತ್ ವ್ಯಾಪ್ತಿಯ 1272 ಮನೆಗಳಿಗೂ ಸೋಲಾರ್ ಅಳವಡಿಸುವ ಮೂಲಕ ಪೆರಾಬೆ ಗ್ರಾಮ ಪಂಚಾಯತ್‌ನ್ನು ಕತ್ತಲು ಮುಕ್ತ ಗ್ರಾಮವಾಗಿ ಪರಿವರ್ತಿಸಲಾಗುವುದು ಎಂದು ಪೆರಾಬೆ ಗ್ರಾಮ ಪಂಚಾಯತ್ ಸೋಲಾರ್ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಯಮುನಾ ಎಸ್ ರೈ ತಿಳಿಸಿದ್ದಾರೆ.
ಅವರು ಗುರುವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ನಿಟ್ಟಿನಲ್ಲಿ ಪಂಚಾಯತ್ ವ್ಯಾಪ್ತಿಯ ಎಲ್ಲಾ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿಕೊಂಡು ಜನಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ 483 ಮನೆಗಳಿಗೆ ಸೋಲಾರ್ ಅಳವಡಿಸಲಾಗಿದೆ. ಸೋಲಾರ್ ಅಳವಡಿಕೆಗೆ ಸೆಲ್ಕೋ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. ಅಲ್ಲದೆ ಇತರ ಸಂಸ್ಥೆಗಳಿಂದ ಅಳವಡಿಸುವಂತೆ ಜನತೆಯ ಬೇಡಿಕೆಯಿದ್ದಲ್ಲಿ ಅವರಿಗೂ ಅವಕಾಶ ನೀಡಲಾಗುವುದು. ಆದರೆ ಗುಣಮಟ್ಟದ ನಿಟ್ಟಿನಲ್ಲಿ ಸೆಲ್ಕೋ ಕಂಪೆನಿಗೆ ಆದ್ಯತೆ ನೀಡಲಾಗಿದೆ ಎಂದರು. ಸೋಲಾರ್ ಅಳವಡಿಕೆ ವಿಚಾರದಲ್ಲಿ ಯಾವುದೇ ಹಣದ ವ್ಯವಹಾರವನ್ನು ಅನುಷ್ಠಾನ ಸಮಿತಿ ಮಾಡುತ್ತಿಲ್ಲ. ಈ ಹಿನ್ನಲೆಯಲ್ಲಿ ಹಣದ ಅವ್ಯವಹಾರ ಆಗಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ನುಡಿದ ಯಮುನಾ ಎಸ್ ರೈ ಅವರು ಸೋಲಾರ್ ಹಣ ಪಾವತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಈ ಹಿಂದೆ ಪತ್ರಿಕೆಯಲ್ಲಿ ಬಂದಿರುವ ವರದಿಯಲ್ಲಿ ಸತ್ಯಾಂಶವಿಲ್ಲ. ಪಂಚಾಯತ್ ಕಾರ್ಯದರ್ಶಿ ನೀಡಿರುವ ಗೊಂದಲದ ಹೇಳಿಕೆ ಹಾಗೂ ಕುಂತೂರು ಗ್ರಾಮದ ನೇಮಿರಾಜ್ ಎಂಬವರು ನೀಡಿರುವ ತಪ್ಪು ಮಾಹಿತಿಯಿಂದಾಗಿ ಈ ಆರೋಪ ವ್ಯಕ್ತವಾಗಿದೆ. ಮಾಧ್ಯಮದವರು ವರದಿ ಪ್ರಕಟಣೆಗೆ ಮೊದಲು ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸೋಲಾರ್ ಅನುಷ್ಠಾನ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿಗಳನ್ನು ಸಂಪರ್ಕಿಸದೇ ವರದಿ ಮಾಡಿರುವುದರಿಂದ ಈ ತಪ್ಪು ಮಾಹಿತಿ ಸಮಾಜಕ್ಕೆ ರವಾನೆಯಾಗಿದೆ ಎಂದರು. ನಮ್ಮ ಗ್ರಾಮ ಪಂಚಾಯತ್‌ನ ಎಲ್ಲಾ ಮನೆಯವರು ಸೋಲಾರ್ ಅಳವಡಿಸಿ ಬೆಳಕಿನ ವ್ಯವಸ್ಥೆಯಲ್ಲಿ ಸ್ವಾವಲಂಬಿಗಳಾಗಬೇಕು ಎಂಬುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವ ಕಂಪೆನಿಯ ಸೋಲಾರ್ ಅಳವಡಿಸಬೇಕು ಎಂಬುದು ಮನೆ ಮಂದಿಯ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಇದರಲ್ಲಿ ಯಾವುದೇ ಕಡ್ಡಾಯ ಅಥವಾ ಬಲವಂತ ಮಾಡುವುದಿಲ್ಲ. ಆದರೆ ಮಾದ್ಯಮಗಳಲ್ಲಿ ಬಲತ್ಕಾರದಲ್ಲಿ ಸೋಲಾರ್ ಹಾಕಿಸಿದ್ದಾರೆ ಎಂದು ಹೇಳಿರುವುದು ಸತ್ಯಕ್ಕೆ ದೂರವಾದ ವಿಚಾರ ಎಂದು ಸ್ಪಷ್ಟನೆ ನೀಡಿದರು. ಸೋಲಾರ್ ಅಳವಡಿಕೆಯ ದರಪಟ್ಟಿಯೂ ಪಾರದರ್ಶಕ ಮತ್ತು ಐಚ್ಚಿಕವಾಗಿದ್ದು, 4 ಬಲ್ಬುಗಳ ವೆಚ್ಚವು ರೂ.14,800ರಿಂದ ರೂ.20,000 ಇರುತ್ತದೆ. ಆದರೆ ಅಳವಡಿಸಿರುವ ಸಿಸ್ಟಮ್‌ನಲ್ಲಿ ಬಲ್ಬು, ಪ್ಯಾನಲ್, ಬ್ಯಾಟರಿ, ರೆಗ್ಯುಲೇಟರ್, ವಯರಿನ ಗೇಜಿ ಬೇರೆ ಬೇರೆಯಾಗಿರುತ್ತದೆ. ಅವುಗಳ ದರವೂ ಬೇರೆ ಬೇರೆಯಾಗಿರುತ್ತದೆ. ಇದನ್ನು ಮುಂದಿಟ್ಟು ನೇಮಿರಾಜ್ ಶೇಡಿ ಅವರು ಮಾದ್ಯಮಗಳಿಗೆ ತಪ್ಪು ಮಾಹಿತಿ ನೀಡಿ ಮೋಸಗೊಳಿಸಿದ್ದಾರೆ ಎಂದು ಅವರು ಆರೋಪಿಸಿದರು. ಸೋಲಾರ್ ಅಳವಡಿಕೆ ವಿಚಾರದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಎಲ್ಲಾ ಮನೆಗಳಿಗೂ ಹಂತ ಹಂತವಾಗಿ ಸೋಲಾರ್ ಅಳವಡಿಸಿ ಕತ್ತಲೆ ಮುಕ್ತ ಪೆರಾಬೆ ಗ್ರಾಮ ಪಂಚಾಯತ್ ಆಗಿ ಪರಿವರ್ತನೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪೆರಾಬೆ ಗ್ರಾಮಪಂಚಾಯತ್ ಅಧ್ಯಕ್ಷೆ ಬೇಬಿ ಸಿ. ಪಾಟಾಳಿ, ಉಪಾಧ್ಯಕ್ಷ ಜಮನಾರ್ದನ ಶೆಟ್ಟಿ, ಸೋಲಾರ್ ಅನುಷ್ಠಾನ ಸಮಿತಿ ಕಾರ್ಯದರ್ಶಿ ಪೂವಪ್ಪ ನಾಯ್ಕ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಹರೀಶ್ ಉಪಸ್ಥಿತರಿದ್ದರು.





