ಮಂಜೇಶ್ವರ : ಯುಡಿಎಫ್ ಕೋಟೆಯ ಮೇಲೆ ಬಿಜೆಪಿ ಕಣ್ಣು, ಮರಳಿ ಪಡೆಯುವ ಯತ್ನದಲ್ಲಿ ಎಡರಂಗ
ಮಂಜೇಶ್ವರ ವಿಧಾನ ಸಭಾ ಕ್ಷೇತ್ರ
ಮಂಜೇಶ್ವರ, ಮಾ.17: ಕರ್ನಾಟಕ-ಕೇರಳ ಗಡಿ ಪ್ರದೇಶದಲ್ಲಿರುವ ಮಂಜೇಶ್ವರ ವಿಧಾನಸಭಾ ಕ್ಷೇತ್ರವು ಪ್ರಸ್ತುತ ಯುಡಿಎಫ್‌ನ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿದೆ. ಆದರೂ ಬಿಜೆಪಿ ಈ ಕ್ಷೇತ್ರದ ಮೇಲೆ ಕಣ್ಣಿರಿಸಿದ್ದು, ಈಗಾಗಲೇ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ತನ್ಮಧ್ಯೆ ಈ ಸ್ಥಾನವನ್ನು ಉಳಿಸಿಕೊಳ್ಳುವ ಯತ್ನದಲ್ಲಿ ಎಡರಂಗವಿದೆ.
1987ರ ಬಳಿಕ ಒಂದು ಬಾರಿ ಹೊರತುಪಡಿಸಿದರೆ ಉಳಿದ ಎಲ್ಲ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಈ ಎಲ್ಲ ಚುನಾವಣೆಯಲ್ಲೂ ಬಿಜೆಪಿ ದ್ವಿತೀಯ ಸ್ಥಾನದಲ್ಲಿತ್ತು. 1957ರಲ್ಲಿ ಸ್ವತಂತ್ರ ಅಭ್ಯರ್ಥಿ ಎಂ.ಉಮೇಶ್ ರಾವ್ ಅವಿರೋಧವಾಗಿ ಆಯ್ಕೆಯಾಗಿದ್ದರು. 1960, 1965 ಮತ್ತು 1967ರಲ್ಲಿ ನಡೆದ ಚುನಾವಣೆಯಲ್ಲಿ ಕನ್ನಡ ಹೋರಾಟಗಾರ ಕಳ್ಳಿಗೆ ಮಹಾಬಲ ಭಂಡಾರಿ ಗೆಲುವು ಸಾಧಿಸಿದ್ದರು. ಬೀಡಿ ಕಾರ್ಮಿಕರು ಮತ್ತು ಕೃಷಿಕರೇ ಅಧಿಕ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ 1970ರಿಂದ 1987ರವರೆಗೆ ಸಿಪಿಐ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಲೀಗ್-ಕಾಂಗ್ರೆಸ್ ಒಕ್ಕೂಟ ರಚನೆಯ ಬಳಿಕ 1987ರಲ್ಲಿ ಮುಸ್ಲಿಂ ಲೀಗ್‌ನಿಂದ ಚೆರ್ಕಳಂ ಅಬ್ದುಲ್ಲ ಗೆಲುವು ಸಾಧಿಸಿದ್ದರು. ಆ ಬಳಿಕ 19 ವರ್ಷಗಳ ಕಾಲ ಈ ಕ್ಷೇತ್ರ ಚೆರ್ಕಳಂ ಅಬ್ದುಲ್ಲರ ಪರವಾಗಿತ್ತು.
ತನ್ಮಧ್ಯೆ ಬಿಜೆಪಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಪ್ರಯತ್ನಿಸುತ್ತಲೇ ಬಂದಿತ್ತು. 1991ರಲ್ಲಿ ಬಿಜೆಪಿಯ ಕೆ.ಜಿ.ಮಾರಾರ್ 1072 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಆ ಬಳಿಕದ ಎಲ್ಲ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಮತ ಗಳಿಸುತ್ತಲೇ ಸಾಗಿತು. 2006ರಲ್ಲಿ ಚೆರ್ಕಳಂ ಅಬ್ದುಲ್ಲರಿಗೆ ಸಿಪಿಎಂನ ನ್ಯಾಯವಾದಿ ಸಿ.ಎಚ್. ಕುಂಞಂಬು ಬ್ರೇಕ್ ನೀಡಿದರು. ಆದರೆ 2011ರಲ್ಲಿ ಈ ಕ್ಷೇತ್ರವನ್ನು ಮುಸ್ಲಿಂ ಲೀಗ್ ಮತ್ತೆ ಪಡೆಯಿತು. ಪಿ.ಬಿ.ಅಬ್ದುರ್ರಝಾಕ್, ಸಿ.ಎಚ್.ಕುಂಞಂಬುರನ್ನು ಸೋಲಿಸಿದರು. ಈ ಬಾರಿಯೂ ಮುಸ್ಲಿಂ ಲೀಗ್‌ನಿಂದ ಹಾಲಿ ಶಾಸಕ ಪಿ.ಬಿ.ಅಬ್ದುರ್ರಝಾಕ್ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್ ಸ್ಪರ್ಧಿಸುವರು. ಸಿಪಿಎಂ ಮಾಜಿ ಶಾಸಕ ಸಿ.ಎಚ್. ಕುಂಞಿಂಬುರವರನ್ನೇ ಮತ್ತೆ ಕಣಕ್ಕಿಳಿಸಲು ನಿರ್ಧರಿಸಿದೆ. ಈ ಕ್ಷೇತ್ರದಲ್ಲಿ 1,76,817 ಮತದಾರರಿದ್ದಾರೆ. ಈ ಪೈಕಿ 88,748 ಪುರುಷರು, 88,069 ಮಹಿಳಾ ಮತದಾರರಿದ್ದಾರೆ. ಕಳೆದ ಬಾರಿ ಶೇ.75.21 ಮತದಾನವಾಗಿತ್ತು. ಈ ಬಾರಿ ಸುಮಾರು 10 ಸಾವಿರದಷ್ಟು ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ.
ಈ ಹೊಸ ಮತದಾರರು ಯಾರನ್ನೂ ಬೆಂಬಲಿಸುತ್ತಾರೆ ಎಂಬುದರ ಮೇಲೆ ಗೆಲುವು ನಿರ್ಣಯವಾಗಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಟಿ.ಸಿದ್ದೀಕ್ ಮುನ್ನಡೆ ಸಾಧಿಸಿದ್ದರು. ತುಳು, ಕನ್ನಡ ಬಾಷಾ ಅಲ್ಪಸಂಖ್ಯಾತರ ಸ್ವಾಧೀನವುಳ್ಳ ಈ ಕ್ಷೇತ್ರದಲ್ಲಿ ತಾವರೆ ಅರಳಿಸಲು ಪ್ರಯತ್ನ ನಡೆಯುತ್ತಿದೆ. ಇಲ್ಲಿ ಭಾಷೆ, ಜಾತಿಯ ಮತಗಳು ನಿರ್ಣಾಯಕವಾಗಲಿದೆ. ವರ್ಷ ಗೆಲುವು ಪಡೆದ ಮತ 1957 ಎಂ.ಉಮೇಶ್ ರಾವ್(ಸ್ವತಂತ್ರ) ಅವಿರೋಧ ಆಯ್ಕೆ 1960 ಮಹಾಬಲ ಭಂಡಾರಿ 23,129
1965 ಮಹಾಬಲ ಭಂಡಾರಿ 20,983, 1967 ಮಹಾಬಲ ಭಂಡಾರಿ 23,471, 1970 ಎಂ.ರಾಮಪ್ಪ(ಸಿಪಿಐ) 18,686, 1977 ಎಂ.ರಾಮಪ್ಪ(ಸಿಪಿಐ) 25,709, 1980 ಡಾ.ಎ.ಸುಬ್ಬಾರಾವ್(ಸಿಪಿಐ) 20,816, 1982 ಡಾ.ಎ.ಸುಬ್ಬಾರಾವ್(ಸಿಪಿಐ) 19,554, 1987 ಚೆರ್ಕಳಂ ಅಬ್ದುಲ್ಲ (ಲೀಗ್) 33,853, 1991 ಚೆರ್ಕಳಂ ಅಬ್ದುಲ್ಲ(ಲೀಗ್) 29,603, 1996 ಚೆರ್ಕಳಂ ಅಬ್ದುಲ್ಲ(ಲೀಗ್) 34,705, 2001 ಚೆರ್ಕಳಂ ಅಬ್ದುಲ್ಲ(ಲೀಗ್) 47,494, 2006 ಸಿ.ಎಚ್.ಕುಂಞಂಬು(ಸಿಪಿಎಂ) 39,242
2011 ಪಿ.ಬಿ.ಅಬ್ದುರ್ರಝಾಕ್ (ಲೀಗ್) 49,817, 2011 ರ ಚುನಾವಣೆ ಅಭ್ಯರ್ಥಿ ಪಕ್ಷ ಪಡೆದ ಮತ ಶೇ.ಮತ ಪಿ.ಬಿ.ಅಬ್ದುರ್ರಝಾಕ್ (ಲೀಗ್) 49,817 39.00







