ಧೋನಿಯ ಹಮ್ಮರ್ ವಾಹನ ಸ್ಕಾರ್ಪಿಯೋ ಆಗಿದ್ದು ಹೇಗೆ ಗೊತ್ತೇ ?
ಈಗ ತೆರಿಗೆ ಹಾಗು ದಂಡ ತೆರಬೇಕು ಭಾರತೀಯ ಕಪ್ತಾನ

ರಾಂಚಿ , ಮಾ. 17: 2009 ರಲ್ಲಿ ರಾಂಚಿಯ ಸಾರಿಗೆ ಇಲಾಖೆ ಮಾಡಿದ "ಎಡವಟ್ಟಿನಿಂದ " ಭಾರತೀಯ ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಈಗ ಹೊಸತಾಗಿ ತೆರಿಗೆ ಹಾಗು ದಂಡ ತೆರಬೇಕಾಗಿ ಬಂದಿದೆ. ಇದಕ್ಕೆ ಕಾರಣ - ಧೋನಿಯ ಹೊಸ ಹಮ್ಮರ್ ಎಚ್ 2 ವಿಲಾಸಿ ಕಾರನ್ನು ಸಾರಿಗೆ ಇಲಾಖೆ ಮಹಿಂದ್ರ ಸ್ಕಾರ್ಪಿಯೋ ಎಂದು ನೋಂದಾವಣೆ ಮಾಡಿದ್ದು.
ಸ್ಕಾರ್ಪಿಯೋ ಎಂದು ತಪ್ಪಾಗಿ ಟೈಪ್ ಮಾಡಿದ್ದರಿಂದ ಆಗ ಧೋನಿಗೆ ಕೇವಲ ರೂ. 53,000 ನೋಂದಾವಣೆ ಶುಲ್ಕ ಕಟ್ಟಲು ಹೇಳಲಾಗಿತ್ತು. ನಿಜವಾಗಿ ಧೋನಿಯ ಹಮ್ಮರ್ ಗೆ 4 ಲಕ್ಷ ರೂಪಾಯಿ ಕತ್ತಬೇಕಾಗಿತ್ತು. " ಅವರು 2010 ರವರೆಗಿನ ತೆರಿಗೆ ಕಟ್ಟಿದ್ದಾರೆ. ಈಗ ಅವರು ನಿಯಮ ಪ್ರಕಾರ ಒಂದು ಬಾರಿಯ ತೆರಿಗೆ ಹಾಗು ದಂಡ ಕಟ್ಟಬೇಕು" ಎಂದು ರಾಂಚಿಯ ಡಿ ಟಿ ಒ ನಾಗೇಂದ್ರ ಪಾಸ್ವಾನ್ ಹೇಳಿದ್ದಾರೆ.
" ಹಮ್ಮರ್ ಅಂತಾರಾಷ್ಟ್ರೀಯ ಬ್ರ್ಯಾಂಡ್ ಆದ್ದರಿಂದ ಟೈಪಿಸ್ಟ್ ಗೆ ಸಿದ್ದ ಪಟ್ಟಿಯಲ್ಲಿ ಆ ವಾಹನದ ಹೆಸರು ಸಿಗಲಿಲ್ಲ. ವಾಹನ ಯಾವುದೆಂದು ಕಂಪ್ಯೂಟರ್ ನಲ್ಲಿ ನಮೂದಿಸದೆ ಮುಂದೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಆತ ಸ್ಕಾರ್ಪಿಯೋ ಎಂದು ಹಾಕಿ ಬಿಟ್ಟಿದ್ದಾನೆ. ಅದು ಟೈಪಿಂಗ್ ಮಿಸ್ಟೇಕ್ " ಎಂದು ಪಾಸ್ವಾನ್ ಹೇಳಿದ್ದಾರೆ.
ಒಂದು ಕೋಟಿ ರೂ. ಮೌಲ್ಯದ ಹಮ್ಮರ್ ಅನ್ನು ಧೋನಿ 2009 ರಲ್ಲಿ ಖರೀದಿಸಿದ್ದರು.





