ಕೊಣಾಜೆ: ‘ಕನಕಗಂಗೋತ್ರಿ’ ಕನಕದಾಸರ ಕೀರ್ತನ ಗಾಯನ ಕಾರ್ಯಕ್ರಮವನ್ನು ಉದ್ಘಾಟನೆ

ಕನಕಗಂಗೋತ್ರಿ ಕಾರ್ಯಕ್ರಮದಲ್ಲಿ ಡಾ.ಆರ್.ಪೂರ್ಣಿಮಾ ಮಾತನಾಡಿದರು
ಪರ್ಯಾಯ ಸಂಸ್ಕೃತಿಯ ಬೆಳವಣಿಗೆಯಲ್ಲಿ ಕನಕದಾಸರ ಪಾತ್ರ ಪ್ರಮುಖವಾದುದು
ಕನಕ ಗಂಗೋತ್ರಿ ಕಾರ್ಯಕ್ರಮ ಉದ್ಘಾಟಿಸಿ ಡಾ.ಆರ್.ಪೂರ್ಣಿಮಾ
ಕೊಣಾಜೆ: ದೇಶದಲ್ಲಿ ಹಿಂದಿನಿಂದಲೂ ಜಾತಿ, ಅಧಿಕಾರ, ಶೋಷಣೆಯ ವಿರುದ್ದ ಸಂಘರ್ಷಗಳು ನಡೆದಿರುವದನ್ನು ನಾವು ಗಮನಿಸಬಹುದು. ಸುಮಾರು 12ನೇ ಶತಮಾನದ ಸಮಯದಲ್ಲಿ ಶೋಷಣೆಗಳ ವಿರುದ್ದ ಧ್ವನಿ ಕೇಳಿಬಂದು ವಚನಕಾರರ ಮೂಲಕ ಪರ್ಯಾಯ ಸಂಸ್ಕೃತಿಯು ಬೆಳವಣಿಗೆಗೊಂಡಿತ್ತು. ಇಂತಹ ಚಳುವಳಿಯಲ್ಲಿ ಯಾರೂ ಕೂಡಾ ಮೇಲ್ವರ್ಗದವರು ಇಲ್ಲದೆ ಕೇವಲ ಹಿಂದುಳಿದ ವರ್ಗದವರೇ ಇದ್ದರು. ಇಂತಹ ಪರ್ಯಾಯ ಸಂಸ್ಕೃತಿಯ ಬೆಳವಣಿಗೆಯಲ್ಲಿ ಕನಕದಾಸರ ಪಾತ್ರವು ಕೂಡಾ ಪ್ರಮುಖವಾದು ಎಂದು ಪ್ರಜಾವಾಣಿ ಪತ್ರಿಕೆಯ ಉಪ ಸಂಪಾದಕಿ ಡಾ.ಆರ್.ಪೂರ್ಣಿಮಾ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ವಿವಿಯ ಹಳೆಸೆನೆಟ್ ಸಭಾಂಗಣದಲ್ಲಿ ಗುರುವಾರ ನಡೆದ ‘ಕನಕಗಂಗೋತ್ರಿ’ ಕನಕದಾಸರ ಕೀರ್ತನ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತವು ಬಹುತ್ವದ ನೆಲೆಯಲ್ಲಿ ಬೆಳೆದಿರುವಂತಹ ದೇಶವಾಗಿದ್ದು, ಇಲ್ಲಿಯ ಸಂಸ್ಕೃತಿ, ಧರ್ಮ ಮುಂತಾದವುಗಳು ಬಹುತ್ವದ ಸ್ವರೂಪದಲ್ಲಿರುವುದನ್ನು ನಾವು ಗಮನಿಸಬಹುದಾಗಿದೆ. ಆದರೆ ಕನಕದಾಸರ ನಂಟು ಇರುವ ಕರಾವಳಿಯಲ್ಲಿ ಇಂದು ದೌರ್ಜನ್ಯ, ಹಿಂಸೆಗಳೂ ಹೆಚ್ಚುತ್ತಿರುವುದು ಆತಂಕ ಸೃಷ್ಟಿಸುತ್ತದೆ. ಆದ್ದರಿಂದ ಕರಾವಳಿಯಲ್ಲಿ ಕನಕದಾಸರ ಚಿಂತನೆ, ಪ್ರಭಾವನ್ನು ಹೆಚ್ಚು ಹೆಚ್ಚು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಅವರು ಹೇಳಿದರು. ಸಮಾನತೆಯ ಸಾರವನ್ನು ಎತ್ತಿ ಹಿಡಿದ ಕನಕದಾಸರ ಕೀರ್ತನೆಯಲ್ಲಿ ತಾತ್ವಿಕ ಚಿಂತನೆಗಳು, ಸಾಮಾಜಿಕ ವ್ಯವಸ್ಥೆಯ ಬಗೆಯನ್ನು ನಾವು ಅರಿತುಕೊಳ್ಳಬಹುದು. ಆದ್ದರಿಂದ ಇಂದಿನ ಕಾಲಕ್ಕೆ ಅವರ ಚಿಂತನೆಗಳು ಹೆಚ್ಚು ಪ್ರಸ್ತುತವಾಗಿದೆ ಎಂದು ಅವರು ಹೇಳಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕರಾದ ಡಾ.ಉದಯ ಬಾರ್ಕೂರು ಅವರು, ಕನಕದಾಸರು ಕೀರ್ತನೆಯ ಮೂಲಕ ಸಮಾಜದ ಪರಿವರ್ತನೆಗಾಗಿ ಮೌನಕ್ರಾಂತಿಯ ಮೂಲಕ ಹೋರಾಡಿದ ಮಹಾನುಭವರಾಗಿದ್ದಾರೆ. ಅಂದಿನ ಕಾಲದಲ್ಲಿ ದಾಸಪರಂಪರೆಯಲ್ಲಿ ಹುಟ್ಟಿದ ಪ್ರತಿಭಟನೆ, ಹೋರಾಟದ ಪರಿಣಾಮವಾಗಿ ಇಂದು ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಾಗಿ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತ ವಿದ್ಯಾರ್ಥಿಗಳೂ ವ್ಯಾಸಾಂಗ ಮಾಡುವಂತಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಟಿ.ಡಿ.ಕೆಂಪರಾಜು ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕನಕದಾಸ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ.ಶಿವರಾಮ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.
ಕನಕದಾಸ ಸಂಶೋಧನಾ ಕೇಂದ್ರದ ಸಂಶೋಧನಾ ಸಹಾಯಕ ನಿತಿನ್ ಕಾರ್ಯಕ್ರಮ ನಿರೂಪಿಸಿ, ವಸಂತ್ ವಂದಿಸಿದರು. ವಿದ್ಯಾರ್ಥಿನಿ ನಂದಿನಿ ಕನಕದಾಸರ ಕೀರ್ತನೆಯನ್ನು ಹಾಡಿದರು.
ಕನಕಗಂಗೋತ್ರಿ ಕಾರ್ಯಕ್ರಮವನ್ನು ಪ್ರಜಾವಾಣಿ ಪತ್ರಿಕೆಯ ಉಪ ಸಂಪಾದಕಿ ಡಾ.ಆರ್.ಪೂರ್ಣಿಮಾ ಉದ್ಘಾಟಿಸಿದರು.






