ಧೈರ್ಯ, ಕೌಶಲ ಬೆಳವಣಿಗೆಗೆ ಸ್ಕೌಟ್ ಸಹಕಾರಿ: ಡಾ.ಪ್ರಶಾಂತ್ ನಾಯ್ಕ
ಕೊಣಾಜೆ ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನ ಸ್ಕೌಟ್ಸ್ ದಳದ ಪ್ರಾರಂಭೋತ್ಸವ,
ಕೊಣಾಜೆ: ಭಾರತದಲ್ಲಿ ಸ್ಕೌಟ್ ಚಳುವಳಿಗೆ ಶತಮಾನದ ಇತಿಹಾಸವಿದೆ. ಯುವ ಜನತೆಯು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಬೆಳವಣಿಗೆ ಹೊಂದಲು ಸ್ಕೌಟ್ ಒಂದು ಉತ್ತಮ ವೇದಿಕೆಯಾಗಿದ್ದು, ಸಮಾಜ ಸೇವೆಯಲ್ಲಿ ರಚನಾತ್ಮಕವಾಗಿ ಪಾಲ್ಗೊಳ್ಳಲು ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಮಾತ್ರವಲ್ಲ ಭವಿಷ್ಯದಲ್ಲಿ ಎಂತಹುದೇ ಪರಿಸ್ಥಿತಿಯನ್ನು ಧೈರ್ಯ ಮತ್ತು ಜಾಣ್ಮೆಯಿಂದ ಎದುರಿಸುವ ಕೌಶಲ್ಯವನ್ನೂ ಸ್ಕೌಟ್ ಕಲಿಸಿಕೊಡುತ್ತದೆ ಎಂದು ಮಂಗಳೂರು ವಿವಿ ಸಹ ಪ್ರಾಧ್ಯಾಪಕರಾದ ಡಾ. ಪ್ರಶಾಂತ ನಾಯ್ಕ
ಅವರು ಅಭಿಪ್ರಾಯ ಪಟ್ಟರು. ಅವರು ಕೊಣಾಜೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ನೂತನ ಸ್ಕೌಟ್ ದಳದ ಪ್ರಾರಂಭೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು
ಜಗತ್ತಿದಾದ್ಯಂತ ವಿಜ್ಞಾ ನ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಕಾಣುವ ಮಹಾನ್ ವ್ಯಕ್ತಿಗಳ ಸಾಧನೆಯ ಹಿಂದೆ ಅವರು ವಿದ್ಯಾರ್ಥಿ ಜೀವನದಲ್ಲಿ ಸ್ಕೌಟ್‌ನಿಂದ ಪಡೆದ ತರಬೇತಿ ಮತ್ತು ಸ್ಪೂರ್ತಿಯ ಪ್ರಭಾವ ಇರುವುದನ್ನು ಅವರ ಜೀವನಚರಿತ್ರೆಯಲ್ಲಿ ಮನಗಾಣಬಹುದು. ಒಬ್ಬ ಸ್ಕೌಟ್‌ಗೆ ನಿಷ್ಠೆ, ಸ್ನೇಹಪರತೆ, ವಿನಯಶೀಲತೆ, ನಿಸರ್ಗ ಮತ್ತು ಪ್ರಾಣಿ ಪ್ರೇಮ, ಶಿಸ್ತು, ಸಾರ್ವಜನಿಕ ಅಸ್ತಿ ರಕ್ಷಣೆ, ಧೈರ್ಯಶಾಲಿ, ಪ್ರೌಢಿಮೆ ಹಾಗೂ ಕಾಯ, ವಾಚ, ಮನಸಾ ಶುದ್ಧತೆಯಿಂದ ಬದುಕುವುದನ್ನು ಕಲಿಸಿಕೊಡುತ್ತದೆ. ಈ ನಿಯಮಗಳು ಸ್ಕೌಟ್-ಗೈಡ್ಸ್‌ಗಳಿಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ಅನುಕರಣೀಯ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸ್ಕೌಟ್ಸ್, ಗೈಡ್ಸ್ ದಳಕ್ಕೆ ಸೇರಿ ಅಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವೂದರ ಜೊತೆಗೆ, ದೇಶ ಸೇವೆ, ಸಮಾಜ ಸೇವೆ ಮತ್ತು ಪ್ರಕೃತಿ ಸೇವೆಗಳನ್ನು ಮಾಡುತ್ತಾ ಮಾದರಿ ಪ್ರಜೆಯಾಗಿ ಮೂಡಿಬರಬೇಕು
ಎಂದು ಅವರು ಹೇಳಿದರು. ಮಂಗಳ ಸೇವಾ ಟ್ರಸ್ಟ್ ನಿರ್ದೇಶಕರಾದ ಅಚ್ಚುತ ಗಟ್ಟಿಯವರು ಮಾತಾನಾಡಿ, ಸ್ಕೌಟ್ ಮತ್ತು ಗೈಡ್ಸ್‌ನಲ್ಲಿ ತರಬೇತಿ ಪಡೆದ ಯುವಜನಾಂಗವು ವಿಪತ್ತು ನಿರ್ವಹಣೆಯನ್ನು ಸಮರ್ಥವಾಗಿ ನಿರ್ವಹಿಸಬಲ್ಲರು. ಸ್ಕೌಟ್‌ನಲ್ಲಿ ಮಾಡಿದ ಪ್ರಮಾಣವನ್ನು, ಅಲ್ಲಿರುವ ಧ್ಯೇಯ, ನಿಯಮಗಳನ್ನು ಜೀವನದುದ್ದಕ್ಕೂ ಪಾಲಿಸಿ ಪ್ರಜಾವಂತ ನಾಗರೀಕರಾಗಿ ಬದುಕಬೇಕು ಎಂದು ಹೇಳಿದರು.
ದಳದ ನಾಯಕನಾಗಿ ವೇಣುಗೋಪಾಲ ಶೆಟ್ಟಿ ಹಾಗೂ ಪಟ್ಟಾಲಂ ನಾಯಕರಾಗಿ ಸಂದೀಪ್ ಡಿಸೋಜ, ಕೋಮಲೇಶ್, ಮತ್ತು ನಿಶಾಂತ್ ಕರ್ನೆಲಿಯೊ ಆಯ್ಕೆಯಾದರು. ಒಂಬತ್ತು ವಿದ್ಯಾರ್ಥಿಗಳಿಗೆ ಪ್ರವೇಶ ಪದಕವನ್ನು ತೊಡಿಸುವುದರೊಂದಿಗೆ ಅತಿಥಿಗಳಿಂದ ಕ್ಯಾಪ್ ಮತ್ತು ಸ್ಕಾರ್ಪ್‌ನ್ನು ನೀಡಿ ಗೌರವಿಸಲಾಯಿತು. ಈ ಪ್ರಕ್ರಿಯೆಯನ್ನು ಶಾಲೆಯ ಸ್ಕೌಟ್ ಮಾಸ್ಟರ್ ರಾಜೀವ್ ನಾಯ್ಕ ನೆರೆಸಿದರು. ಈ ಸಂದರ್ಭದಲ್ಲಿ ಅಬ್ದುಲ್ ನಾಸಿರ್, ಜಿಲ್ಲಾ ಸ್ಕೌಟ್ ತರಬೇತಿ ಕೌನ್ಸಿಲರ್ ತ್ಯಾಗಂ ಹರೇಕಳ, ಉಳ್ಳಾಲ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಅಬ್ದುಲ್ ಮಜೀದ್, ಮಂಜನಾಡಿ ಸ.ಹಿ.ಪ್ರಾ. ಶಾಲೆಯ ಸ್ಕೌಟ್ ಮಾಸ್ಟರ್ ಪ್ರತೀಪ್, ಶಾಲಾ ಮುಖ್ಯೋಪಾಧ್ಯಾಯಿನಿ ಮೀನಾ ಗಾವಂಕರ್ ಉಪಸ್ಥಿತರಿದ್ದರು.





