ಮೂಡುಬಿದಿರೆ: ಅಕ್ರಮ ಗೂಡಂಗಡಿಗಳ ತೆರವು, ಅಂಗಡಿ ಮಾಲಿಕನಿಂದ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ

ಮೂಡುಬಿದಿರೆ: ಇಲ್ಲಿನ ಪುರಸಭಾ ವ್ಯಾಪ್ತಿಯೊಳಗೆ ಅಕ್ರಮ ಗೂಡಂಗಡಿಗಳ ತೆರವು ಕಾರ್ಯಾಚರಣೆಯನ್ನು ಗುರುವಾರವು ಮುಂದುವರಿಸಿದ ಪುರಸಭೆ ಅನೇಕ ಬೀದಿ ಬದಿ ಅಂಗಡಿಗಳನ್ನು ತೆರವುಗೊಳಿಸಿದ್ದು ಈ ಸಂದರ್ಭದಲ್ಲಿ ಗೂಡಂಗಡಿ ಮಾಲಿಕನೋರ್ವ ಕರ್ತವ್ಯಕ್ಕೆ ಅಡ್ಡಿಪಡಿಸಿ ಪೌರ ಕಾರ್ಮಿಕರೊಬ್ಬರಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಸಂಜೆ ಮೂಡುಬಿದಿರೆ ಮಾರ್ಕೆಟ್ ಹಿಂಬದಿ ರಸ್ತೆ ಬದಿಯಲ್ಲಿದ್ದ ಅಕ್ರಮ ಗೂಡಂಗಡಿಯನ್ನು ತೆರವುಗೊಳಿಸುವ ಕಾರ್ಯಚರಣೆ ನಡೆಸುವ ವೇಳೆ ಸಿಟ್ಟಿಗೆದ್ದ ಅಂಗಡಿ ಮಾಲಿಕ ಹರೀಶ್ ಎಂಬವರು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಪೌರ ಕಾರ್ಮಿಕ ಮುತ್ತು ಎಂಬವರಿಗೆ ಹಲ್ಲೆ ನಡೆಸಿದ್ದಾರೆನ್ನಲಾಗಿದ್ದು ಇದರಿಂದ ಸ್ವಲ್ಪ ಹೊತ್ತು ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಮುನ್ನೆಚ್ಚರಿಕೆ ವಹಿಸಿದ ಬಳಿಕ ಗೂಡಂಗಡಿಯನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. ಸಂಜೆಯವರೆಗೆ ಸುಮಾರು ಐದು ಗೂಡಂಗಡಿಗಳನ್ನು ಪುರಸಭೆ ತೆರವುಗೊಳಿಸಿದೆ.
ಕರ್ತವ್ಯಕ್ಕೆ ಅಡ್ಡಿ,ದೂರು : ಗೂಡಂಗಡಿ ತೆರವು ಸಂದರ್ಭದಲ್ಲಿ ಅಂಗಡಿ ಮಾಲಿಕ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ನಡೆಸಿರುವ ಬಗ್ಗೆ ಪುರಸಭೆ ಅಧಿಕಾರಿ ಪೊಲೀಸರಿಗೆ ದೂರು ನೀಡಿರುತ್ತಾರೆ. ಅಕ್ರಮ ಗೂಡಂಗಡಿಗಳ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ.





