ಆಮಂತ್ರಣ ಪತ್ರಿಕೆ ಬದಲಾಯಿಸದಿದ್ದಲ್ಲಿ ಜಿಲ್ಲಾ ಬಂದ್‌ಗೆ ಕರೆ: ಸತ್ಯಜಿತ್ ಸುರತ್ಕಲ್ ಎಚ್ಚರಿಕೆ
ಜಾತ್ರೋತ್ಸವ ಆಮಂತ್ರಣದಲ್ಲಿ ಜಿಲ್ಲಾಧಿಕಾರಿ ಹೆಸರು ವಿರೋಧಿಸಿ ಪ್ರತಿಭಟನೆ

ಪುತ್ತೂರು, ಮಾ.17: ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಣಗೊಂಡಿರುವ ಹಿಂದೂಯೇತರ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಹೆಸರನ್ನು ಬದಲಾಯಿಸಿ, ಮರುಮುದ್ರಣ ಮಾಡದಿದ್ದಲ್ಲಿ ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾ ಬಂದ್ ನಡೆಸಲು ಕರೆ ನೀಡಲಾಗುವುದು ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಚಾಲಕ ಸತ್ಯಜಿತ್ ಸುರತ್ಕಲ್ ಎಚ್ಚರಿಸಿದರು. ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಹೆಸರು ಮುದ್ರಿಸಿರುವುದನ್ನು ವಿರೋಧಿಸಿ ಮತ್ತು ಆಮಂತ್ರಣ ಪತ್ರಿಕೆ ಬದಲಾಯಿಸಲು ಆಗ್ರಹಿಸಿ ಗುರುವಾರ ಪುತ್ತೂರಿನ ಮಿನಿ ವಿಧಾನಸೌಧದ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಹೆಸರು ಹಾಕಿರುವುದರಲ್ಲಿ ತಪ್ಪೇನು ಎಂಬ ಉದ್ದಟತನದ ಹೇಳಿಕೆಯನ್ನು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ನೀಡುತ್ತಿದ್ದಾರೆ. ಅವರು ತಮ್ಮ ಮಾತನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ ಸತ್ಯಜಿತ್, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದೇವಾಲಯಗಳ ಆಡಳಿತ ನಿರ್ವಹಣೆಯೂ ಸೇರಿದಂತೆ ದೇವಳದ ಎಲ್ಲ ನಿರ್ವಹಣೆಗಳಲ್ಲಿ ಹಿಂದೂಗಳೇ ಕರ್ತವ್ಯ ನಿರ್ವಹಿಸಬೇಕು ಎಂದು ಎಂಡೋಮೆಂಟ್ ಕಾಯ್ದೆಯ 7ನೆ ಸೆಕ್ಷನ್‌ನಲ್ಲಿ ಸ್ಪಷ್ಟವಾಗಿ ಹೇಳಿದೆ. ಹೀಗಿದ್ದರೂ ಪುತ್ತೂರು ದೇವಾಲಯದ ವಾರ್ಷಿಕ ಜಾತ್ರೆಯ ಆಮಂತ್ರಣ ಪತ್ರಿಕೆಯಲ್ಲಿ ಹಿಂದೂಯೇತರ ಅಧಿಕಾರಿ ಆಗಿರುವ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂರ ಹೆಸರನ್ನು ಹಾಕುವ ಮೂಲಕ ಕಾನೂನು ಉಲ್ಲಂಘಿಸಲಾಗಿದೆ. ಇದರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದರು.
ಹಿಂದೂ ಸಮಾಜ ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿರುವುದಿಲ್ಲ. ಹಿಂದೂಗಳ ಸಹನೆಯ ಜೊತೆಗೆ ಚೆಲ್ಲಾಟವಾಡಿದರೆ ಮುಂದೆ ಸಂಭವಿಸಬಹುದಾದ ಎಲ್ಲ ಅನಾಹುತಗಳಿಗೆ ಸರಕಾರವೇ ನೇರ ಹೊಣೆ ಎಂದು ಸತ್ಯಜಿತ್ ಎಚ್ಚರಿಸಿದರು. ರಾಜ್ಯದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಜನಾರ್ದನ ಪೂಜಾರಿ ಮೊದಲಾದವರು ಆಮಂತ್ರಣ ವಿಚಾರವನ್ನು ಸಮರ್ಥಿಸಿ ಹೇಳಿಕೆ ನೀಡುತ್ತಿದ್ದಾರೆ. ಮುಂದೊಂದು ದಿನ ಜಿಲ್ಲೆಗೆ ಹಿಂದೂ ಜಿಲ್ಲಾಧಿಕಾರಿ ಬರುತ್ತಾರೆ. ಆ ಸಂಧರ್ಭದಲ್ಲಿ ಉಳ್ಳಾಲ, ಎಮ್ಮೆಮಾಡು ಮೊದಲಾದ ಕಡೆಗಳಲ್ಲಿ ನಡೆಯುವ ಉರೂಸ್ ಕಾರ್ಯಕ್ರಮಗಳಿಗೆ, ಕಾರ್ಕಳ ಚರ್ಚ್‌ನಲ್ಲಿ ನಡೆಯುವ ಉತ್ಸವಗಳಿಗೆ ಜಿಲ್ಲಾಧಿಕಾರಿಯವರ ಅನುಮತಿ ಮೇರೆಗೆ ಅನುದಾನ ಹೋಗುತ್ತದೆ ಎಂಬ ಕಾರಣಕ್ಕೆ ಆ ಹಿಂದೂ ಜಿಲ್ಲಾಧಿಕಾರಿಯವರ ಹೆಸರಿನಲ್ಲಿ ಆಮಂತ್ರಣ ಮುದ್ರಿಸುವ ತಾಕತ್ತು ನಿಮಗಿದೆಯಾ ಎಂದು ಸತ್ಯಜಿತ್ ಪ್ರಶ್ನಿಸಿದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ಬಜರಂಗದಳದ ವಿಭಾಗ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ ಮಾತನಾಡಿದರು.
ಪುತ್ತೂರು ಮಹಾಲಿಂಗೇಶ್ವರ ದೇವಾಲಯ ವಠಾರದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಸರಕಾರಕ್ಕೆ ಸಲ್ಲಿಸಿದ ಮನವಿಯನ್ನು ವಾಚಿಸಿದರು
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವ ಮಟಂದೂರು, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಗೌರವಾಧ್ಯಕ್ಷ ಯು. ಪೂವಪ್ಪ, ಅಧ್ಯಕ್ಷ ಡೀಕಯ್ಯ ಪೆರ್ವೋಡಿ, ಬಿಜೆಪಿ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಪ್ರಧಾನ ಕಾರ್ಯದರ್ಶಿ ಶಂಭು ಭಟ್, ನಗರಸಭಾ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಬಿಜೆಪಿ ಪ್ರಮುಖರಾದ ಚನಿಲ ತಿಮ್ಮಪ್ಪಶೆಟ್ಟಿ, ಬಂಗಾರಡ್ಕ ವಿಶ್ವೇಶ್ವರ ಭಟ್, ಬೂಡಿಯಾರ್ ರಾಧಾಕೃಷ್ಣ ರೈ, ಜಯಂತಿ ಆರ್. ನಾಯಕ್, ಚಂದ್ರಶೇಖರ್ ರಾವ್ ಬಪ್ಪಳಿಗೆ, ಗೌರಿ ಬನ್ನೂರು, ಕೇಶವ ಬಜತ್ತೂರು, ಸುರೇಶ್ ಆಳ್ವ ಸಾಂತ್ಯ, ಶಶಿಕುಮಾರ್ ರೈ ಬಾಲ್ಯೊಟ್ಟು, ಆರ್ .ಸಿ. ನಾರಾಯಣ, ರವಿಕಿರಣ್ ಶೆಟ್ಟಿ ಬೆದ್ರಾಡಿ, ವಕೀಲ ಚಿನ್ಮಯ ರೈ, ತಾಪಂ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ನಗರಸಭಾ ಸದಸ್ಯರಾದ ರಾಜೇಶ್ ಬನ್ನೂರು, ಸುಧೀಂದ್ರ ಪ್ರಭು, ವಿನಯ ಭಂಡಾರಿ ಉಪಸ್ಥಿತರಿದ್ದರು.







