ಆಧಾರ್ ಮಸೂದೆಯಲ್ಲಿ ಕಾರ್ಯಾಂಗಕ್ಕೆ ಅತಿರೇಕದ ಅಧಿಕಾರ
ಹೊಸದಿಲ್ಲಿ, ಮಾ.17: ಸರಕಾರದ ಬೊಕ್ಕಸದಿಂದ ಖರ್ಚಾಗುವ ಒಂದು ಪೈಸೆಯನ್ನೂ 12 ಅಂಕಗಳ ವಿಶೇಷ ಗುರುತು ಸಂಖ್ಯೆಯ ಮೂಲಕ ಕಂಡು ಹಿಡಿಯಬಹುದೆನ್ನುವ ವಿಶ್ವಾಸವು ಅದು ಆಧಾರ್ ಕಾರ್ಯಕ್ರಮವನ್ನು ಉತ್ತೇಜಿಸಲು ಕಾರಣವಾಗಿದೆ. ಆದರೆ, ಆಧಾರ್ ಸಂಖ್ಯೆ ಕೇವಲ ಹಣವನ್ನು ಮಾತ್ರ ಪತ್ತೆ ಹಚ್ಚುವುದಿಲ್ಲ. ಅದು, ಆಶ್ಚರ್ಯಕರ ಸಾಮರ್ಥ್ಯದೊಂದಿಗೆ ಜನರನ್ನು ಗುರುತಿಸಲೂ ಸಹಾಯ ಮಾಡುತ್ತದೆ.
ಇದು ಆಧಾರ್ ಕಾರ್ಯಕ್ರಮದ ಕುರಿತು ವಿವಾದದ ಕೇಂದ್ರ ಬಿಂದುವಾಗಿದೆ.
ರಾಜ್ಯಸಭೆಯಲ್ಲಿ ಬುಧವಾರ ಆಧಾರ್ (ಆರ್ಥಿಕ ಮತ್ತು ಇತರ ಸಬ್ಸಿಡಿಗಳು, ಲಾಭಗಳು ಹಾಗೂ ಸೇವೆಗಳ ಪೂರೈಕೆ ಗುರಿ) ಮಸೂದೆ-2016 ಮಂಜೂರಾತಿಗಾಗಿ ಬಂದಾಗ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಸೂದೆಯನ್ನು ಬಲವಾಗಿ ಸಮರ್ಥಿಸಿದ್ದರು. ಖಾಸಗಿತನದ ವಿಚಾರಕ್ಕೆ ಬಂದಾಗ, ಎನ್‌ಡಿಯ ಸರಕಾರದ ಮಸೂದೆಯು 2010ರಲ್ಲಿ ಯುಪಿಎ ಸರಕಾರ ಪ್ರಸ್ತಾವಿಸಿದ್ದ ಕರಡಿಗಿಂತ ಅತಿ ಹೆಚ್ಚು ಕಠಿಣವಾಗಿದೆ. ಈ ಮಸೂದೆಯನ್ವಯ ಕೇವಲ 2 ಸಂದರ್ಭಗಳಲ್ಲಿ ಮಾತ್ರ ಯುಐಡಿಎಇ ಸಂಗ್ರಹಿಸಿರುವ ವೈಯಕ್ತಿಕ ಮಾಹಿತಿಯನ್ನು ಹಂಚಲು ಸಾಧ್ಯವಿದೆ. ಮೊದಲನೆಯದು, ತನ್ನ ವಿವರವನ್ನು ಹಂಚಿಕೊಳ್ಳಲು ಆಧಾರ್ ಸಂಖ್ಯೆ ಹೊಂದಿರುವವನ ಸಮ್ಮತಿಯಿದ್ದಾಗ ಹಾಗೂ ಎರಡನೆಯದು, ರಾಷ್ಟ್ರೀಯ ಭದ್ರತೆಯ ನೆಲೆಯಲ್ಲಿ ಸರಕಾರಿ ಸಂಸ್ಥೆಯೊಂದು ಈ ಮಾಹಿತಿ ಬಯಸಿದಾಗ ಎಂದು ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.
ಆದರೆ, ಎನ್‌ಡಿಎಯಾಗಲಿ ಯುಪಿಎಯಾಗಲಿ ಬಗೆಹರಿಸದ ಖಾಸಗೀತನದ ಕಳವಳದ ಕುರಿತ ಚರ್ಚೆ ಹಾಗೂ ಹೊಸ ಮಸೂದೆ ಅತೀ ಹೆಚ್ಚು ಮೂಲಭೂತವಾಗಿದೆ.
ಆಧಾರ್ ಮಸೂದೆಯ ಕಾನೂನನ್ನು ಹೇಗೆ ನಿರ್ವಹಿಸಬೇಕು ಎಂದು ನಿರ್ಧರಿಸುವ ಮಿರಿಮೀರಿದ ಅಧಿಕಾರವನ್ನು ಕಾರ್ಯಾಂಗಕ್ಕೆ ನೀಡುತ್ತದೆ.
ಪ್ರತಿಯೊಂದು ಕಾಯ್ದೆಯೂ, ಅದರ ಜಾರಿಯ ಸಾಧಕ-ಬಾಧಕಗಳನ್ನು ವಿವರಿಸುವ ನಿಯಮಗಳನ್ನು ಸರಕಾರ ರೂಪಿಸುವುದನ್ನು ಬಯಸುತ್ತದೆ.
ಆದರೆ, ಸಂಸತ್ತು ಮಂಜೂರು ಮಾಡಿರುವ ಆಧಾರ್‌ಮಸೂದೆಯು, ಸುಮಾರು ಎಲ್ಲ ಪ್ರಸ್ತಾಪಗಳಿಗೆ ನಿಬಂಧನೆಗಳನ್ನು ರೂಪಿಸುವ ಹಾಗೂ ಸಂಗ್ರಹಿಸಿ ಬೇಕಾದ ಜೈವಿಕ ಹಾಗೂ ಜೀವಶಾಸ್ತ್ರೀಯ ಗುರುತುಗಳ ಬಗ್ಗೆ ಬರೆಯುವ ಅಧಿಕಾರವನ್ನು ಯುಐಡಿಎಐಗೆ ನೀಡುತ್ತದೆ.
ಕಾಯ್ದೆಯು ಕಾರ್ಯಾಂಗದ ಕೈಗೆ ಮಿತಿ ಮೀರಿದ ಅಧಿಕಾರ ನೀಡಿದೆಯೆಂದು ಬೆಂಗಳೂರು ಮೂಲದ ಸಂಶೋಧನೆ ಸಮರ್ಥಕ ಗುಂಪು ‘ಸೆಂಟರ್ ಫಾರ್ ಇಂಟರ್ನೆಟ್ ಆ್ಯಂಡ್ ಸೊಸೈಟಿಯ’ ಕಾರ್ಯವಾಹಿ ನಿರ್ದೇಶಕ ಸುನೀಲ್ ಅಬ್ರಹಾಂ ಅಭಿಪ್ರಾಯಿಸಿದ್ದಾರೆ.
ಉದಾಹರಣೆಗೆ: ಜನರ ಯಾವುದೇ ಜೀವಶಾಸ್ತ್ರೀಯ ಗುರುತನ್ನೂ ಸಂಗ್ರಹಿಸ ಬೇಕೇ ಎಂದು ನಿರ್ಧರಿಸುವ ಅಧಿಕಾರವನ್ನು ಯುಐಡಿಎಐಗೆ ಮಸೂದೆ ನೀಡುತ್ತದೆ. ಅಂದರೆ, ಮುಂದೊಂದು ದಿನ ಸರಕಾರ ಎಲ್ಲ ಆಧಾರ್ ಕಾರ್ಡ್‌ಧಾರಿಗಳ ಡಿಎನ್‌ಎಯನ್ನೂ ಸಂಗ್ರಹಿಸುವುದನ್ನು ಕಡ್ಡಾಯಗೊಳಿಸಬಹುದು. ಈ ಉದಾಹರಣೆ ಬುಧವಾರ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದೆ.
ಯುಐಡಿ ಪ್ರಾಧಿಕಾರ ನಾಳೆ ಡಿಎನ್‌ಎ ಅಗತ್ಯವೆಂದು ನಿರ್ಧರಿಸಬಹುದು. ಆಗ, ಅವರು ಡಿಎನ್‌ಎ ಮಾಹಿತಿಯನ್ನೂ ಪಡೆಯುವ ಅಧಿಕಾರ ಪಡೆಯುತ್ತಾರೆ. ಆದುದರಿಂದ ಯುಐಡಿ ಪ್ರಾಧಿಕಾರಕ್ಕೆ ಯಾವುದೇ ಅಧಿಕಾರ ನೀಡಬಾರದೆಂದು ಕಾಂಗ್ರೆಸ್ ಸಂಸದ ಜೈರಾಂ ರಮೇಶ್ ಆಗ್ರಹಿಸಿದ್ದಾರೆ.
ಸಚಿವರು ಯುಐಡಿಎಐ ಹೊರಡಿಸಿರುವ ನಿಬಂಧನೆಗಳ ಬಗ್ಗೆ ವಿಶ್ವಾಸವನ್ನು ವಿವರಿಸಲು ಪ್ರಯತ್ನಿಸಿದರು. ಕಾಯ್ದೆಯಾದ್ಯಂತ ‘ನಿಬಂಧನೆಗಳು’ ಎಂಬ ಶಬ್ದ ಸುಮಾರು 50 ಬಾರಿ ಬಂದಿದೆ. ಆದರೆ, ಮಾಹಿತಿ ಹಕ್ಕು ಕಾಯ್ದೆ ಅಥವಾ 2010ರ ಮಸೂದೆಯ ಪಾಠಗಳಲ್ಲಿ ಆ ಶಬ್ದ 10ಕ್ಕಿಂತಲೂ ಕಡಿಮೆ ಸಲ ಪ್ರಯೋಗವಾಗಿದೆ.
ಯುಐಡಿಎಐ ಹೊರಡಿಸಿರುವ ಅಧಿಸೂಚನೆಗಳನ್ನು ಸಂಸದೀಯ ಅನುಮೋದನೆಗೆ ಇರಿಸಿದಾಗ, ಸದಸ್ಯರು ಈಗಲೂ ಅವುಗಳನ್ನು ಪರಾಮರ್ಶಿಸಬಹುದೆಂದು ಜೇಟ್ಲಿ ಹೇಳಿದ್ದಾರೆ.





