ಎಸ್ಟಿಪಿ-ಟಿಎಸ್ಪಿ ಯೋಜನೆಯಡಿ 8,788 ಕೋಟಿ ರೂ. ವೆಚ್ಚ: ಆಂಜನೇಯ

ಬೆಂಗಳೂರು, ಮಾ. 17: ಪ್ರಸಕ್ತ ಸಾಲಿನಲ್ಲಿ ಎಸ್ಟಿಪಿ-ಟಿಎಸ್ಪಿ ಯೋಜನೆಯಡಿ ಸಮಾಜ ಕಲ್ಯಾಣ ಇಲಾಖೆ ಹಂಚಿಕೆ ಮಾಡಿದ್ದ 16,352 ಕೋಟಿ ರೂ.ಗಳ ಪೈಕಿ 8,788 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಗ್ರಾ.ಪಂ.ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಡಿಮೆ ವೆಚ್ಚ ಮಾಡಲಾಗಿದೆ. ಉಳಿದ ಮೊತ್ತವನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಅಗತ್ಯ ಪೂರ್ಣ ಪ್ರಮಾಣದಲ್ಲಿ ವೆಚ್ಚ ಮಾಡಲು ಕ್ರಮ ಕೈಗೊಳ್ಳಲಾಗುವುದೆಂದರು.
ಸಮಾಜ ಕಲ್ಯಾಣ ಇಲಾಖೆಯ 1797 ವಿದ್ಯಾರ್ಥಿಗಳಲ್ಲಿ 1.56 ಲಕ್ಷಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಅದೇ ರೀತಿಯಲ್ಲಿ ಹಿಂದುಳಿದ ವರ್ಗಗಳ 2,408 ವಿದ್ಯಾರ್ಥಿ ನಿಲಯಗಳಲ್ಲಿ 1.75 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಸೌಕರ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಆಂಜನೇಯ ತಿಳಿಸಿದರು.
ಭೂ ಒಡೆತನ: ಭೂ ಒಡೆತನ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಭೂ ರಹಿತ ಕೂಲಿ ಕಾರ್ಮಿಕರಿಗೆ ತಲಾ ಎರಡು ಎಕರೆಯಂತೆ ಒಟ್ಟು 2261 ಮಂದಿ ಪರಿಶಿಷ್ಟರಿಗೆ ಖಾಸಗಿಯವರಿಗೆ ಭೂಮಿ ಖರೀದಿಗೆ ‘ಭೂ ಒಡೆತನ’ ನೀಡಲಾಗಿದೆ ಎಂದು ಆಂಜನೇಯ ಮಾಹಿತಿ ನೀಡಿದರು.
ಪ್ರಸಕ್ತ (2015-16) ಸಾಲಿನಲ್ಲಿ ‘ವಿದ್ಯಾಸಿರಿ’ ಯೋಜನೆಯಡಿ ಒಟ್ಟು 96,438 ಮಂದಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳ 1,500 ರೂ.ನಂತೆ ವಾರ್ಷಿಕ 15 ಸಾವಿರ ರೂ.ಧನ ಸಹಾಯ ನೀಡಲಾಗುತ್ತಿದ್ದು, ಒಟ್ಟು 112.50 ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದು ಆಂಜನೇಯ ವಿವರಿಸಿದರು.
1ಲಕ್ಷ ಮಂದಿಗೆ ಸೌಲಭ್ಯ: ಮುಂದಿನ ಸಾಲಿನಿಂದ ‘ವಿದ್ಯಾಸಿರಿ’ ಯೋಜನೆಯನ್ನು 1 ಲಕ್ಷಕ್ಕೂ ಅಧಿಕ ಮಂದಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದ ಅವರು, ವಿದೇಶಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಹೆಚ್ಚಿನ ನೆರವು ನೀಡಲಾಗಿದೆ ಎಂದು ಹೇಳಿದರು.
ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 36 ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು, ಒಟ್ಟು 26 ಸಾವಿರ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕೆಲ ತಾಂತ್ರಿಕ ಕಾರಣಗಳಿಗಾಗಿ ಬಾಕಿಯಿರುವ ಕೊಳವೆಬಾವಿಗಳನ್ನು ತ್ವರಿತಗತಿಯಲ್ಲಿ ಕೊರೆಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿದ್ದು ಪ್ಯಾಕೇಜ್ ಟೆಂಡರ್ ನೀಡಲಾಗಿದೆ ಎಂದರು.
ಸಿಬ್ಬಂದಿ ನೇಮಕ: ಸಮಾಜ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇದ್ದ 52 ‘ಎ’ ಮತ್ತು ‘ಬಿ’ ದರ್ಜೆ ಹುದ್ದೆಗಳು, 1764 ಅಡುಗೆ ಸಹಾಯಕರು ಹಾಗೂ ಕಾವಲುಗಾರರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಅದೇ ರೀತಿ ಹಿಂ.ವರ್ಗಗಳ ಇಲಾಖೆಯಲ್ಲಿನ 866 ಎ, ಬಿ, ಸಿ ದರ್ಜೆ ಹುದ್ದೆಗಳು ಹಾಗೂ 4017 ‘ಡಿ’ ದರ್ಜೆ ಹುದ್ದೆಗಳನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಚಂದ್ರಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಶಾಲಿನಿ ರಜನೀಶ್, ಈ. ವೆಂಕಟಯ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.





