ಅಸ್ವಸ್ಥರಾದ ರವಿ ತಾಯಿ, ವಿಷ ಕುಡಿದ ಸಂಬಂಧಿ: ಧರಣಿ ಸ್ಥಗಿತ
ಡಿ.ಕೆ.ರವಿ ಸಾವು ಪ್ರಕರಣ: ನ್ಯಾಯಕ್ಕಾಗಿ ಒತ್ತಾಯ

ಬೆಂಗಳೂರು, ಮಾ. 17: ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ನಗರದಲ್ಲಿ ಡಿ.ಕೆ.ರವಿ ಕುಟುಂಬ ಹಮ್ಮಿಕೊಂಡಿದ್ದ ಧರಣಿಯು ಎರಡನೆ ದಿನವಾದ ಇಂದು ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು.
ನ್ಯಾಯಕ್ಕಾಗಿ ಆಗ್ರಹಿಸಿ ಬುಧವಾರದಿಂದ 7 ದಿನಗಳ ಕಾಲ ನಗರದ ಆನಂದ್ ರಾವ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಮಧ್ಯಾಹ್ನದವರೆಗೂ ಶಾಂತಿಯುತವಾಗಿ ಸಾಗಿತ್ತು. ಮಧ್ಯಾಹ್ನದ ನಂತರ ಪ್ರತಿಭಟನಾ ಸ್ಥಳದಲ್ಲಿ ಡಿ.ಕೆ.ರವಿ ಸಾವಿಗೆ ನ್ಯಾಯ ಕೊಡಬೇಕು ಎಂದು ಆಗ್ರಹಿಸಿ ಡಿ.ಕೆ.ರವಿ ಕುಟುಂಬದ ಸಂಬಂಧಿ ಹುಲಿಯೂರು ದುರ್ಗಾದ ಕರಿಗೌಡ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು. ನಂತರ ಪೊಲೀಸರು ಅತನನ್ನು ತಡೆದು ವಿಷ ವಶಪಡಿಸಿಕೊಂಡು ಆತನನ್ನು ಬಂಧಿಸಿದ ಪ್ರಸಂಗ ನಡೆಯಿತು.
ಅಸ್ವಸ್ಥರಾದ ಗೌರಮ್ಮ: ಡಿ.ಕೆ.ರವಿ ಕುಟುಂಬದ ಸಂಬಂಧಿ ಕರಿಗೌಡರನ್ನು ಪೊಲೀಸರು ಬಂಧಿಸಿದ ವಿಷಯ ತಿಳಿಯುತ್ತಿದ್ದಂತೆ ರವಿಯವರ ತಾಯಿ ಗೌರಮ್ಮ ನಿತ್ರಾಣಗೊಂಡು ಅಸ್ವಸ್ಥರಾದರು. ಈ ಸಂದರ್ಭದಲ್ಲಿ ವೈದ್ಯಕೀಯ ಉಪಚಾರವನ್ನು ನಿರಾಕರಿಸಿದ ಅವರಿಗೆ ಸಂಬಂಧಿಕರು ಆರೈಕೆ ಮಾಡಿದರು.
ಪ್ರತಿಭಟನೆಯನ್ನು ಕೈ ಬಿಡುವುದಾಗಿ ಹೇಳಿದ ಗೌರಮ್ಮ: ಪ್ರತಿಭಟನೆಗೆ ಸರಕಾರದಿಂದ ಅನುಮತಿ ಪಡೆದಿಲ್ಲ ಎಂದು ಹೇಳಿ ಪ್ರತಿಭಟನೆಯನ್ನು ನಿಲ್ಲಿಸಬೇಕು ಎಂದು ಪೊಲೀಸರು ನಮ್ಮ ಮೇಲೆ ಒತ್ತಡ ತರುತ್ತಿದ್ದಾರೆ. ಹೀಗಾಗಿ ಪ್ರತಿಭಟನೆಯನ್ನು ನಿಲ್ಲಿಸುವುದಾಗಿ ಗೌರಮ್ಮನವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಪ್ರತಿಭಟನೆ ಕೈಬಿಡುವುದಾಗಿ ಹೇಳಿದ್ದು ಟಿವಿಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಮೂರು ಸಾವಿರ ಮಂದಿ ಪಾಲ್ಗೊಂಡು ಪ್ರತಿಭಟನೆಯನ್ನು ಮುನ್ನಡೆಸುವುದಾಗಿ ಹೇಳಿದರು.
ಪರಿಹಾರ ನಿರಾಕರಣೆ: ಪ್ರತಿಭಟನಾ ಸ್ಥಳದಲ್ಲಿ ಉಮ್ರಾ ಡೆವಲಪರ್ಸ್ ವ್ಯವಸ್ಥಾಪಕ ನಿರ್ದೇಶಕ ಹುಸೈನ್ ಶರೀಫ್ ನೀಡಿದ 10 ಲಕ್ಷ ರೂಗಳ ಚೆಕ್‌ಅನ್ನು ಡಿ.ಕೆ. ರವಿ ತಾಯಿ ಗೌರಮ್ಮ ನಿರಾಕರಿಸಿದರು. ನಾವು ಇಲ್ಲಿ ಸಹಾಯಕ್ಕಾಗಿ ಪ್ರತಿಭಟನೆ ಮಾಡುತ್ತಿಲ್ಲ. ನನಗೆ ನನ್ನ ಪುತ್ರನ ಸಾವಿಗೆ ನ್ಯಾಯ ಬೇಕು ಎಂದು ಪಟ್ಟು ಹಿಡಿದರು.
ಬಿಗಿ ಪೊಲೀಸ್ ಬಂದೋಬಸ್ತ್..
ಡಿ.ಕೆ.ರವಿ ಸಾವಿನ ಪ್ರಕರಣ ಕುರಿತಂತೆ ಸಿಬಿಐ ನಡೆಸಿರುವ ತನಿಖೆಯ ವರದಿಯನ್ನು ಕುಟುಂಬಕ್ಕೆ ನೀಡಬೇಕು ಎಂದು ಆಗ್ರಹಿಸಿ ಡಿ.ಕೆ.ರವಿ ಕುಟುಂಬ ಹಮ್ಮಿಕೊಂಡಿರುವ ಧರಣಿಗೆ ರಾಜ್ಯದ ವಿವಿಧ ಸಂಘಟನೆಗಳು ಸಾಥ್ ನೀಡಿವೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಹಿರಿಯ ಪೊಲೀಸ್ ಅಧಿಕಾರಿ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಏಳು ದಿನಗಳ ಒಳಗಾಗಿ ನನ್ನ ಪುತ್ರನ ಸಾವಿನ ಪ್ರಕರಣದ ಸಿಬಿಐ ತನಿಖೆಯ ವರದಿಯನ್ನು ನಮ್ಮ ಕುಟುಂಬಕ್ಕೆ ನೀಡಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ರೈತರನ್ನು ಸಂಘಟಿಸಿ ಮೃತ ಮಗನ ದೇಹವನ್ನು ಹೊರ ತೆಗೆದು, ವಿಧಾನ ಸೌಧದ ಮುಂದೆ ಅಸ್ಥಿಪಂಜರವನ್ನಿಟ್ಟು ಪ್ರತಿಭಟಿಸಲಾಗುವುದು.
-ಗೌರಮ್ಮ, ಮೃತ ಡಿ.ಕೆ.ರವಿ ತಾಯಿ







