ರಾಜ್ಯದಲ್ಲಿ ಗಣಿತ, ವಿಜ್ಞಾನಗಳಲ್ಲಿ ನಗರದ ವಿದ್ಯಾರ್ಥಿಗಳನ್ನು ಮೀರಿಸಿದ ಹಳ್ಳಿಹೈದರು

ಬೆಂಗಳೂರು,ಮಾ.17: ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಕರ್ನಾಟಕದ ಗ್ರಾಮೀಣ ವಿದ್ಯಾರ್ಥಿಗಳು 10ನೆ ತರಗತಿಯ ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ನಗರ ಪ್ರದೇಶಗಳ ವಿದ್ಯಾರ್ಥಿಗಳಿಗಿಂತ ಉತ್ತಮ ಸಾಧನೆಯನ್ನು ಪ್ರದರ್ಶಿಸುತ್ತಾರೆ ಎಂದು ಇದೇ ಮೊದಲ ಬಾರಿಗೆ ನಡೆಸಲಾದ ರಾಷ್ಟ್ರೀಯ ಸಾಧನೆ ಸಮೀಕ್ಷೆಯು ಹೇಳಿದೆ. ಇದು ಪ್ರಮುಖ ವಿಷಯಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ನಗರ ಮತ್ತು ಪಟ್ಟಣಗಳ ವಿದ್ಯಾರ್ಥಿಗಳಿಗಿಂತ ಹಿಂದಿರುತ್ತಾರೆ ಎಂಬ ಪ್ರಚಲಿತ ಭಾವನೆಯ ಬುಡಕ್ಕೇ ಪೆಟ್ಟು ನೀಡಿದೆ.
ಇಂಗ್ಲಿಷ್‌ನಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ರಾಷ್ಟ್ರೀಯ ಸರಾಸರಿ 244ಕ್ಕೆ ಹೋಲಿಸಿದರೆ 259 ಅಂಕಗಳನ್ನು ಗಳಿಸಿದ್ದಾರೆ. ನಗರ ಪ್ರದೇಶಗಳ ವಿದ್ಯಾರ್ಥಿಗಳೂ 259 ಅಂಕಗಳನ್ನು ಗಳಿಸಿರುವರಾದರೂ ರಾಷ್ಟ್ರೀಯ ಸರಾಸರಿಯಾದ 263ಕ್ಕಿಂತ ಹಿಂದುಳಿದಿದ್ದಾರೆ. ಗಣಿತದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು 267 ಅಂಕಗಳನ್ನು (ರಾ.ಸರಾಸರಿ 247) ಗಳಿಸಿದ್ದರೆ, ನಗರ ವಿದ್ಯಾರ್ಥಿಗಳು 256 ಅಂಕಗಳನ್ನು (ರಾ.ಸರಾಸರಿ 255) ಗಳಿಸಿದ್ದಾರೆ.
ವಿಜ್ಞಾನ ಮತ್ತು ಸಮಾಜ ವಿಜ್ಞಾನದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಅನುಕ್ರಮವಾಗಿ 268(ರಾಸ.247 ಮತ್ತು 268(ರಾ.ಸ.247) ಅಂಕಗಳನ್ನು ಗಳಿಸಿದ್ದರೆ, ನಗರ ವಿದ್ಯಾರ್ಥಿಗಳ ಸಾಧನೆ ವಿಜ್ಞಾನದಲ್ಲಿ 261(ರಾ.ಸ.257) ಮತ್ತು ಸಮಾಜ ವಿಜ್ಞಾನದಲ್ಲಿ 260(ರಾ.ಸ.257) ಆಗಿದೆ.
ಹರ್ಯಾಣ,ಮೇಘಾಲಯ,ನಾಗಾಲ್ಯಾಂಡ್‌ಮತ್ತು ಜಮ್ಮು-ಕಾಶ್ಮೀರಗಳಲ್ಲಿ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ. ಈ ರಾಜ್ಯಗಳಲ್ಲಿ ನಗರ ಪ್ರದೇಶಗಳ ವಿದ್ಯಾರ್ಥಿಗಳು ಗ್ರಾಮೀಣ ವಿದ್ಯಾರ್ಥಿಗಳಿಗಿಂತ ಉತ್ತಮ ಸಾಧನೆ ಪ್ರದರ್ಶಿಸಿದ್ದಾರೆ. ಇಂಗ್ಲಿಷ್ ಭಾಷಾ ವಿಷಯದಲ್ಲಿ ಈ ಅಂತರ ಎದ್ದು ಕಾಣುತ್ತಿದೆ.
ಒಟ್ಟಾರೆಯಾಗಿ ಕರ್ನಾಟಕದ ವಿದ್ಯಾರ್ಥಿಗಳು(ನಗರಮತ್ತು ಗ್ರಾಮೀಣ) ಇಂಗ್ಲಿಷ್‌ನಲ್ಲಿ 259,ಗಣಿತ 260,ವಿಜ್ಞಾನ 266 ಮತ್ತು ಸಮಾಜ ವಿಜ್ಞಾನದಲ್ಲಿ 266 ಅಂಕಗಳನ್ನು ಗಳಿಸುವ ಮೂಲಕ ಈ ಎಲ್ಲ ವಿಷಯಗಳ ರಾಷ್ಟ್ರೀಯ ಸರಾಸರಿ(250)ಗಿಂತ ಹೆಚ್ಚಿನ ಸಾಧನೆಯನ್ನು ಮೆರೆದಿದ್ದಾರೆ.







