ಜೆಎನ್‌ಯು ವಿವಾದ: ತನಿಖಾ ಸಮಿತಿಯ ವರದಿ ಒಪ್ಪದಿರಲು ವಿದ್ಯಾರ್ಥಿಗಳ ನಿರ್ಧಾರ

ಹೊಸದಿಲ್ಲಿ, ಮಾ.17: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಸಂಸತ್ ಭವನ ದಾಳಿಯ ಅಪರಾಧಿ ಅಫ್ಝಲ್ ಗುರುವನ್ನು ಬೆಂಬಲಿಸಿ ಫೆ.9ರಂದು ನಡೆದಿದ್ದ ಕಾರ್ಯಕ್ರಮದಲ್ಲಿ ವಹಿಸಿದ್ದ ಪಾತ್ರದ ಬಗ್ಗೆ ವಿವರಣೆ ನೀಡುವಂತೆ ಶೋಕಾಸ್ ನೋಟಿಸ್ ನೀಡಲಾಗಿರುವ ವಿದ್ಯಾರ್ಥಿಗಳು, ವಿವಿಯ ತನಿಖಾ ಮಂಡಳಿಯೊಂದರ ವರದಿಯನ್ನು ಒಪ್ಪದಿರಲು ನಿರ್ಧರಿಸಿದ್ದಾರೆ. ಅದರಂತೆಯೇ ತಾವು ಉತ್ತರವನ್ನು ಕಳುಹಿಸಲಿದ್ದೇವೆಂದು ಅವರು ಹೇಳಿದ್ದಾರೆ.
ದಿಲ್ಲಿಯಲ್ಲಿ ಬುಧವಾರ ತಡರಾತ್ರಿಯವರೆಗೆ ನಡೆದ ಜೆಎನ್‌ಯು ವಿದ್ಯಾರ್ಥಿ ಮಂಡಳಿಯ ಸಭೆಯೊಂದರಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
ವಿಚಾರಣಾ ವರದಿಯ ನ್ಯಾಯ ಬದ್ಧವಲ್ಲದ ತನಿಖಾ ಪ್ರಕ್ರಿಯೆಯನ್ನು ಆಧರಿಸಿದೆ. ಆದುದರಿಂದ ತಾವು ಅದನ್ನು ಅಂಗೀಕರಿಸಲು ನಿರಾಕರಿಸಿದ್ದೇವೆ. ಅದೇ ರೀತಿಯಲ್ಲಿ ಶೋಕಾಸ್ ನೋಟಿಸ್‌ಗೆ ತಾವು ಉತ್ತರ ನೀಡಲಿದ್ದೇವೆಂದು ಮಂಡಳಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ಅವರು, ವಿವಿಯ ನಿಯಮ ಹಾಗೂ ಶಿಸ್ತು ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆಂದು ವಿವಿಯ ಉನ್ನತ ಸಮಿತಿಯೊಂದು ತೀರ್ಮಾನಿಸಿದ ಬಳಿಕ, ಅವರ ವಿರುದ್ಧ ಯಾಕೆ ಶಿಸ್ತು ಕ್ರಮ ಕೈಗೊಳ್ಳಬಾರದೆಂಬುದನ್ನು ವಿವರಿಸುವಂತೆ ಕೇಳಿ ಮಾ.14ರಂದು 12 ಮಂದಿ ವಿದ್ಯಾರ್ಥಿಗಳಿಗೆ ಶೋಕಾಸ್ ನೋಟಿಸ್ ತಿಳಿಸಿವೆ.
ವಿಚಾರಣೆ ಪೂರ್ಣಗೊಂಡಾಗ ಇಬ್ಬರು ವಿದ್ಯಾರ್ಥಿಗಳು ಜೈಲಿನಲ್ಲಿದ್ದರು. ಇನ್ನೊಬ್ಬಾಕೆ, ಈ ಮೊದಲು ಅಮಾನತುಗೊಳಿಸಲಾಗಿರುವ ಐಶ್ವರ್ಯ ಅಧಿಕಾರಿ ಎಂಬ ವಿದ್ಯಾರ್ಥಿನಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಆದರೆ, ಸಮಿತಿಯ ವರದಿಯಲ್ಲಿ ಆಕೆಯ ಹೆಸರಿನ ಉಲ್ಲೇಖವಿಲ್ಲ. ಇದೊಂದು ಭಾರೀ ಪಕ್ಷಪಾತದ ಹಾಗೂ ಅಪ್ರಜಾಸತ್ತಾತ್ಮಕ ತನಿಖೆಯಾಗಿದೆಯೆಂದು ವಿದ್ಯಾರ್ಥಿ ಸಮಿತಿಯ ಸದಸ್ಯರು ಆರೋಪಿಸಿದ್ದಾರೆ.
ಈ ವಿಷಯದಲ್ಲಿ ಕಾನೂನು ಸಲಹೆ ಪಡೆಯಲು ವಿದ್ಯಾರ್ಥಿಗಳು ಹೆಚ್ಚಿನ ಸಮಯಾವಕಾಶ ಕೋರಿದುದರಿಂದ ಶೋಕಾಸ್ ನೋಟಿಸ್‌ಗೆ ಉತ್ತರಿಸುವ ಗಡುವನ್ನು ಉಪಕುಲಪತಿ ಮಾ.18ರ ತನಕ ವಿಸ್ತರಿಸಿದ್ದಾರೆಂದು ವಿವಿಯ ಹಿರಿಯಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೋಟಿಸ್‌ಗೆ ಅವರು ಉತ್ತರ ನೀಡಿದ ಬಳಿಕ ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸಲಾಗುವುದೆಂದು ಅವರು ಹೇಳಿದ್ದಾರೆ.
ಮಾ.11ರಂದು ಸಲ್ಲಿಸಲಾಗಿರುವ ಐವರು ಸದಸ್ಯರ ಸಮಿತಿಯ ವರದಿಯು, ವಿದ್ಯಾರ್ಥಿಗಳು ಹಾಗೂ ಆಡಳಿತದ ತಪ್ಪುಗಳನ್ನು ಬೆಟ್ಟು ಮಾಡಿದೆ.







