ಮೋದಿ ಸರಕಾರದ ಮುಸ್ಲಿಂ ವಿರೋಧಿ ಆಡಳಿತ ಸರಿಯೇ? ಮಾನ್ಯರೆ,
ಮೋದಿ ಸರಕಾರದಲ್ಲಿ ಗುಪ್ತ ಗಾಮಿನಿಯಾಗಿ ಹರಿಯುತ್ತಿರುವ ಮುಸ್ಲಿಮ್ ವಿರೋ ಭಾವನೆ ಈಗ ಬಹಿರಂಗವಾಗಿ ಯಾವ ಹೀನ ಮಟ್ಟಕ್ಕೆ ಮುಟ್ಟಿದೆಯೆಂದರೆ ಈ ಸುದ್ಧಿ ಓದಿದರೆ ಈಗಿನ ಬಿಜೆಪಿ ನೇತೃತ್ವ ಸರಕಾರದ ಗುಪ್ತ ಕಾರ್ಯಸೂಚಿ ಎಷ್ಟೊಂದು ಅನಾಹುತಕಾರಿಯಾಗಿದೆ ಎಂಬ ಅಂದಾಜು ಸಿಗುತ್ತದೆ. ಕಳೆದ ವಾರ ಮುಂಬೈಯ ಪ್ರಮುಖ ಇಂಗ್ಲಿಷ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ಧಿ ಹೀಗಿದೆ:
ಬಿಜೆಪಿ ನೇತೃತ್ವದ ಈಗಿನ ಕೇಂದ್ರ ಸರಕಾರ ಹಿಂದೂಗಳಲ್ಲಿ ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಇನ್ನೊಂದು ವಿವಾದ ಬೇಕೆಂದೇ ಹುಟ್ಟು ಹಾಕಿದೆ. ಆಯುಷ್ ಸಚಿವಾಲಯ ಮುಸ್ಲಿಮರನ್ನು ಉದ್ದೇಶ ಪೂರ್ವಕವಾಗಿ ನೌಕರಿಗೆ ನೇಮಿಸುತ್ತಿಲ್ಲ ಎಂದು ಒಂದು ಆರ್‌ಟಿಐ ಅರ್ಜಿಗೆ ಉತ್ತರವಾಗಿ ಸ್ವತಃ ಅದೇ ಆಯುಷ್ ಸಚಿವಾಲಯ ಲಿಖಿತ ಉತ್ತರ ಕೊಟ್ಟಿದೆ. ತಮ್ಮ ಎನ್‌ಡಿಎ ಸರಕಾರದ ಪಾಲಿಸಿಯಂತೆ ಯಾವುದೇ ಮುಸ್ಲಿಮ್ ಅಭ್ಯರ್ಥಿಯನ್ನು ಆಯುಷ್ ತರಬೇತುಗಾರನಾಗಿ ನೇಮಿಸಲಾಗುವುದಿಲ್ಲ ಅಥವಾ ವಿದೇಶಕ್ಕೆ ನಿಯುಕ್ತಿಗೊಳಿಸಲಾಗುವುದಿಲ್ಲ, ಹಾಗೂ ಇಷ್ಟರವರೆಗೆ 3841 ಮುಸ್ಲಿಮ್ ಅಭ್ಯರ್ಥಿಗಳಿಂದ ಆಯುಷ್ ತರಬೇತುದಾರರಾಗಿ ನಿಯುಕ್ತಿಗೊಳ್ಳಲು ಅರ್ಜಿಗಳು ಬಂದಿದ್ದು ಅದರಲ್ಲಿ ಒಬ್ಬನೇ ಮುಸ್ಲಿಮನಿಗೆ ಈವರೆಗೆ ನೌಕರಿ ಕೊಡಲು ಸಾಧ್ಯವಾಗಿಲ್ಲವೆಂದು ಆಯುಷ್ ಸಚಿವಾಲಯವೇ ತನ್ನ ಲಿಖಿತ ಉತ್ತರದಲ್ಲಿ ಹೇಳಿಕೊಂಡಿದೆ.
ಅಷ್ಟೇ ಅಲ್ಲ ‘‘ಮೋದಿ ಸರಕಾರದ ನೇಮಕಾತಿ ನೀತಿಯಂತೆ ಕೇವಲ ಆಯುಷ್ ಇಲಾಖೆ ಮಾತ್ರವಲ್ಲ ಕೇಂದ್ರ ಸರಕಾರದ ಎಲ್ಲಾ ಇಲಾಖೆಗಳ ನೌಕರಿಗಾಗಿ ಮುಸ್ಲಿಮರನ್ನು ಸದ್ಯ ನೇಮಿಸಬಾರದೆಂದು ಮಾನವ ಸಂಪನ್ಮೂಲ ಸಚಿವಾಲಯ ನಿರ್ಧರಿಸಿದೆ’’ ಎಂದು ನಿರ್ಲಜ್ಜವಾಗಿ ಆರ್‌ಟಿಐ ಅರ್ಜಿಗೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಸಚಿವಾಲಯವೇ ಉತ್ತರಿಸಿದೆಯಂತೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದ ಇಷ್ಟೊಂದು ನಿರ್ಲಜ್ಜವಾಗಿ ಯಾವುದೇ ಹಿಂದಿನ ಸರಕಾರ ಮುಸ್ಲಿಮರಿಗೆ ಸರಕಾರಿ ನೌಕರಿ ಕೊಡಬಾರದೆಂದು ತನ್ನ ನೀತಿಯಾಗಿದೆ ಎಂದು ಲಿಖಿತವಾಗಿ ಉತ್ತರಿಸುವ ಧಾರ್ಷ್ಟ್ಯ ತೋರಿರಲಿಲ್ಲ. ಕೇಂದ್ರ ಸರಕಾರವೇ ಹೀಗೆ ಬಹಿರಂಗ ಪಕ್ಷಪಾತ ತೋರಿದ ಮೇಲೆ ಸರಕಾರದ ಕೃಪಾಪೋಷಿತ ಖಾಸಗಿ ಉದ್ಯಮಿಗಳು ಮತ್ತು ಸಾರ್ವಜನಿಕ ರಂಗದ ಉದ್ಯಮಗಳು ಇದೇ ಮುಸ್ಲಿಮ್ ವಿರೋಧಿ ನೀತಿ ಅನುಸರಿಸದೇ ಇರುತ್ತವೆಯೇ?
ಮೇಲಾಗಿ ಮುಂದಿನ ತಿಂಗಳು ನಡೆಯಲಿರುವ ಐದು ರಾಜ್ಯಗಳ ಚುನಾವಣೆ ಮುಗಿಯುವವರೆಗೆ ಹೆಜ್ಜೆ ಹೆಜ್ಜೆಗೆ ಮುಸ್ಲಿಮರ ವಿರುದ್ಧ ಬಹಿರಂಗವಾಗಿ ಕತ್ತಿ ಮಸೆದು ದ್ವೇಷಪೂರ್ಣ ವಾತಾವರಣ ಸೃಷ್ಟಿಸುತ್ತಲೇ ಇರಬೇಕೆಂದು ಅಮಿತ್ ಶಾ ಕೊಟ್ಟ ಗುಪ್ತ ಕಾರ್ಯಸೂಚಿಯಂತೆಯೇ ದೇಶದೆಲ್ಲೆಡೆ ಬಿಜೆಪಿ ಸಂಸದರು ಮತ್ತು ನೇತಾರರು ಸ್ಥಳೀಯ ಸಂದರ್ಭಕ್ಕೆ ಅನುಗುಣವಾಗಿ ಹೊಸ ಹೊಸ ವಿವಾದ ಹುಟ್ಟು ಹಾಕಿ ಮುಸ್ಲಿಮರ ವಿರುದ್ಧ ಸಮಾಜದಲ್ಲಿ ದ್ವೇಷ ಹುಟ್ಟಿಸಿ ಹಿಂದೂಗಳನ್ನು ತಮ್ಮ ಕಡೆ ಒಲಿಸಿಕೊಳ್ಳಬೇಕೆಂಬ ಗುಪ್ತ ಅಜೆಂಡಾ ಕಾರ್ಯಗತವಾಗುತ್ತಿದೆ. ಇದಕ್ಕೆ ತಾಜಾ ಸಾಕ್ಷಿಯೆಂದರೆ- ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ವಾರ್ಷಿಕ ಜಾತ್ರೆಯ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲಾಕಾರಿ ಎ.ಬಿ.ಇಬ್ರಾಹೀಂರ ಹೆಸರು ಇದೆ ಎಂಬ ಮಾತ್ರಕ್ಕೆ ಅದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವಾಗಿದೆ ಎಂದು ಒಬ್ಬ ಕೇಸರಿ ಬೆಂಬಲಿಗ ಹುಯಿಲೆಬ್ಬಿಸಿದ್ದಾರೆ. ಹಿಂದಿನ ವರ್ಷವೂ ಇದೇ ಮುಸ್ಲಿಮ್ ಜಿಲ್ಲಾಕಾರಿಯ ಹೆಸರು ಆಹ್ವಾನ ಪತ್ರಿಕೆಯಲ್ಲಿ ಇದ್ದರೂ ಆಗ ಯಾರೂ ಆಕ್ಷೇಪ ಎತ್ತಿರಲಿಲ್ಲ. ಆದರೆ ಈ ವರ್ಷ ಇಲ್ಲಿಯ ಒಬ್ಬ ಕೇಸರಿ ಬೆಂಬಲಿಗನೇ ಆಕ್ಷೇಪ ಎತ್ತಿದ್ದಾರೆ ಎಂದರೆ ಇದು ಜೈನ ಅಮಿತ್ ಶಾನ ಗುಪ್ತ ಕಾರ್ಯಸೂಚಿಯ ಅನುಷ್ಠಾನ ಎನ್ನುವುದು ಸ್ಪಷ್ಟ. ತಮ್ಮ ವಿಶ್ವಾಸಿ, -ಆರ್.ಬಿ.ಶೇಣವ, ಮಂಗಳೂರು







