ಮಲ್ಯ ಕಿಂಗ್‌ಫಿಶರ್‌ಹೌಸ್ ಹರಾಜು: ಕೊಳ್ಳುವವರೇ ಇಲ್ಲ!

ಮುಂಬೈ, ಮಾ.17: ಬ್ಯಾಂಕುಗಳಿಗೆ ಅಪಾರ ಪ್ರಮಾಣದ ಸಾಲ ಬಾಕಿ ಮಾಡಿರುವ ಮದ್ಯದೊರೆ ವಿಜಯ ಮಲ್ಯರ ಪ್ರಮುಖ ಆಸ್ತಿಗಳಲ್ಲೊಂದಾಗಿರುವ ಮುಂಬೈಯ ‘ಕಿಂಗ್ ಫಿಶರ್ ಹೌಸ್’ನ ಆನ್‌ಲೈನ್ ಮೂಲಕ ಹರಾಜು ಇಂದಿನಿಂದ ಆರಂಭಗೊಂಡಿದ್ದು, ಮೊದಲ ದಿನ ಯಾವುದೇ ಬಿಡ್‌ಗಳು ಸಲ್ಲಿಕೆಯಾಗಲಿಲ್ಲ.
ಮುಂಬೈಯ ಪಶ್ಚಿಮದ ಉಪನಗರ ಅಂಧೇರಿಯಲ್ಲಿರುವ ಈ ಕಚೇರಿಗೆ ರೂ.250 ಕೋಟಿ ಮೂಲ ಬೆಲೆಯನ್ನು ನಿಗದಿಪಡಿಸಲಾಗಿದೆ. ಸರಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಘಟಕವೊಂದು ಇ-ಹರಾಜಿನ ಮೇಲ್ವಿಚಾರಣೆ ನಡೆಸುತ್ತಿದೆ. ಬ್ಯಾಂಕ್ ಸಾಲವೊಂದರ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮಲ್ಯರಿಗೆ ಸಮನ್ಸ್‌ನಲ್ಲಿ ನೀಡಿರುವ ದಿನಾಂಕಕ್ಕೆ ಒಂದು ದಿನ ಮೊದಲು ಈ ಹರಾಜು ಆರಂಭಗೊಂಡಿದೆ.
ಮಲ್ಯರು ವೈಯಕ್ತಿಕವಾಗಿ ವಿಚಾರಣೆಗೆ ಹಾಜರಾಗಬೇಕೇ ಹೊರತು ವಕೀಲರನ್ನು ಕಳುಹಿಸುವಂತಿಲ್ಲವೆಂದು ಜಾರಿ ನಿರ್ದೇಶನಾಲಯದ (ಇ.ಡಿ) ಮೂಲಗಳು ತಿಳಿಸಿವೆ.
2012ರಲ್ಲಿ ಹಾರಾಟ ನಿಲ್ಲಿಸಿರುವ ಕಿಂಗ್‌ಫಿಶರ್ ವಿಮಾನಸಂಸ್ಥೆಯಿಂದ ಬಾಕಿಯಾಗಿರುವ ರೂ.6 ಸಾವಿರ ಕೋಟಿಗೂ ಹೆಚ್ಚು ಸಾಲದ ವಸೂಲಿಗೆ ಬ್ಯಾಂಕ್‌ಗಳು ಪ್ರಯತ್ನಿಸುತ್ತಿರುವ ನಡುವೆಯೇ ಮಲ್ಯ ಇಂಗ್ಲೆಂಡ್ ಸೇರಿಕೊಂಡಿದ್ದಾರೆ.
ಇ.ಡಿ ಮುಂದೆ ಹಾಜರಾಗಲು ಕಾಲಾವಕಾಶ ಕೋರಿದ ಮಲ್ಯ
ಹೊಸದಿಲ್ಲಿ, ಮಾ.17: ಸಾಲ ಬಾಕಿ ಹಾಗೂ ಹಣ ಚೆಲುವೆ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿರುವ ಮದ್ಯ ದೊರೆ ವಿಜಯ ಮಲ್ಯ ಶುಕ್ರವಾರ ಜಾರಿ ನಿರ್ದೇಶನಾಲಯ(ಇ.ಡಿ)ದೆದುರು ವಿಚಾರಣೆಗೆ ಹಾಜರಾಗುವುದಿಲ್ಲ. ಅವರು ಅದಕ್ಕೆ ಎಪ್ರಿಲ್‌ವರೆಗೆ ಕಾಲಾವಕಾಶ ಯಾಚಿಸಿದ್ದಾರೆ. ಮಲ್ಯರ ಬಂಧನಕ್ಕೆ ಒತ್ತಾಯ ಕೇಳಿ ಬಂದ ಬಳಿಕ ಅವರು ಮಾ.2ರಂದು ದೇಶ ಬಿಟ್ಟು ಹೋಗಿದ್ದಾರೆ. ಯುಬಿ ಗುಂಪಿನ ಮಾಜಿ ಅಧ್ಯಕ್ಷ 17 ಬ್ಯಾಂಕ್‌ಗಳಿಗೆ ರೂ. 9 ಸಾವಿರ ಕೋಟಿಗೂ ಹೆಚ್ಚು ಸಾಲ ಬಾಕಿ ಮಾಡಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೇರೆ ದಾರಿಯನ್ನು ಪರಿಶೀಲಿಸುತ್ತಿದ್ದಾರೆ ಹಾಗೂ ಮಲ್ಯರು ಪತ್ರದಲ್ಲಿ ನೀಡಿರುವ ಉತ್ತರ ಹಾಗೂ ಕಾರಣಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಅವರ ಬೇಡಿಕೆಗೆ ಸಮ್ಮತಿಸುವ ಬಗ್ಗೆ ಅಧಿಕಾರಿಗಳು ಶೀಘ್ರವೇ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ.







