ಇಂಗ್ಲೆಂಡ್‌ಗೆ ಭರ್ಜರಿ ಜಯ

ಮಹಿಳೆಯರ ಟ್ವೆಂಟಿ-20 ವಿಶ್ವಕಪ್
ಬೆಂಗಳೂರು, ಮಾ.17: ಆರಂಭಿಕ ಆಟಗಾರ್ತಿ ಚಾರ್ಲೊಟ್ ಎಡ್ವರ್ಡ್ಸ್(60 ರನ್, 51 ಎಸೆತ, 7 ಬೌಂಡರಿ) ಆಕರ್ಷಕ ಅರ್ಧಶತಕದ ಸಹಾಯದಿಂದ ಇಂಗ್ಲೆಂಡ್ ಮಹಿಳಾ ತಂಡ ಬಾಂಗ್ಲಾದೇಶ ತಂಡವನ್ನು 36 ರನ್‌ಗಳ ಅಂತರದಿಂದ ಮಣಿಸಿತು.
ಗುರುವಾರ ಇಲ್ಲಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಟ್ವೆಂಟಿ-20 ವಿಶ್ವಕಪ್‌ನ ಬಿ ಗುಂಪಿನ ಪಂದ್ಯದಲ್ಲಿ ಗೆಲ್ಲಲು 154 ರನ್ ಗುರಿ ಪಡೆದಿದ್ದ ಬಾಂಗ್ಲಾದೇಶ ಮಹಿಳಾ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 117 ರನ್ ಗಳಿಸಲಷ್ಟೇ ಶಕ್ತವಾಯಿತು.
ವಿಂಡೀಸ್‌ನ ಪರ ನಾಯಕಿ ನಿಗರ್ ಸುಲ್ತಾನಾ(35) ಅಗ್ರ ಸ್ಕೋರರ್ ಎನಿಸಿಕೊಂಡರು. ಸಲ್ಮಾ ಖಾತುನ್ ಔಟಾಗದೆ 32 ರನ್ ಗಳಿಸಿದರು.
ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಎಡ್ವರ್ಡ್ಸ್ ಸಾಹಸದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು. ವಿಂಡೀಸ್‌ನ ಪರ ಜಹಾನರ ಆಲಂ(3-32) ಯಶಸ್ವಿ ಬೌಲರ್ ಎನಿಸಿಕೊಂಡರು
ಪಾಕಿಸ್ತಾನದ ವಿರುದ್ಧ ವಿಂಡೀಸ್‌ಗೆ 4 ರನ್ ಜಯ
ಚೆನ್ನೈ, ಮಾ.17: ಆಫ್-ಸ್ಪಿನ್ನರ್ ಅನಿಸಾ ಮುಹಮ್ಮದ್‌ರ ಅತ್ಯುತ್ತಮ ಬೌಲಿಂಗ್(3-25) ನೆರವಿನಿಂದ ವೆಸ್ಟ್‌ಇಂಡೀಸ್ ತಂಡ ಪಾಕಿಸ್ತಾನ ವಿರುದ್ದದ ಟ್ವೆಂಟಿ-20 ಮಹಿಳಾ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ 4 ರನ್ ಅಂತರದಿಂದ ರೋಚಕ ಜಯ ಸಾಧಿಸಿದೆ.
ಬುಧವಾರ ರಾತ್ರಿ ನಡೆದ ಬಿ ಗುಂಪಿನ ಅಹರ್ನಿಶಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವಿಂಡೀಸ್ 8 ವಿಕೆಟ್‌ಗಳ ನಷ್ಟಕ್ಕೆ 103 ರನ್ ಗಳಿಸಿತ್ತು.
ಇದಕ್ಕೆ ಉತ್ತರವಾಗಿ ಪಾಕಿಸ್ತಾನ ತಂಡ 5 ವಿಕೆಟ್‌ಗಳ ನಷ್ಟಕ್ಕೆ ಕೇವಲ 99 ರನ್ ದಾಖಲಿಸಿತು. ಪಾಕ್‌ಗೆ ಗೆಲುವಿಗೆ ಅಂತಿಮ ಓವರ್‌ನಲ್ಲಿ 12 ರನ್ ಅಗತ್ಯವಿತ್ತು. ಆದರೆ, 8 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದಕ್ಕೆ ಮೊದಲು ಪಾಕ್‌ನ ಅನಮ್ ಅಮಿನ್(4-16) ಅತ್ಯುತ್ತಮ ಬೌಲಿಂಗ್ ಸಂಘಟಿಸಿ ವಿಂಡೀಸ್ ಆಟಗಾರ್ತಿಯರಿಗೆ ಸವಾಲಾದರು. ನಾಯಕಿ ಸ್ಟೆಫಾನಿ ಟೇಲರ್(40) ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ವಿಂಡೀಸ್‌ನ್ನು 100ರ ಗಡಿ ದಾಟಿಸಿದರು.
ಪಾಕ್‌ನ ಅನಮ್ ಅಮೀನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.







