ರಾಜ್ಯದಲ್ಲಿ ಭೀಕರ ಬರ; ಎಡವಿದ ಸರಕಾರ: ಸ್ಪೀಕರ್ ಅಸಮಾಧಾನ

'ಜಿಲ್ಲಾ ಪ್ರವಾಸ ಕೈಗೊಳ್ಳದ ಉಸ್ತುವಾರಿ ಸಚಿವರು'
ಬೆಂಗಳೂರು, ಮಾ.17: ರಾಜ್ಯದಲ್ಲಿ ಭೀಕರವಾದ ಬರಗಾಲವಿದ್ದು, ಕುಡಿಯುವ ನೀರಿಗೂ ಹಾಹಾಕಾರ ವಿದೆ. ಇಂತಹ ಸಂದರ್ಭದಲ್ಲಿಯೂ ಕೆಲ ಜಿಲ್ಲಾ ಉಸ್ತುವಾರಿ ಸಚಿವರು ಸಂಬಂಧಪಟ್ಟ ಜಿಲ್ಲೆಗಳಿಗೆ ಭೇಟಿ ನೀಡುತ್ತಿಲ್ಲ ಎಂಬ ಮಾಹಿತಿ ಸಿಕ್ಕಿದೆ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲದಿಂದಾಗಿ ಈಗಾಗಲೇ ಸಾಕಷ್ಟು ಕಡೆ ಜಾನುವಾರುಗಳು ಮೃತಪಡುತ್ತಿರುವುದು ವರದಿಯಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆಯನ್ನು ನಿರ್ವ ಹಿಸುವಲ್ಲಿ ಸರಕಾರ ಎಡವಿ ದಂತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನೂ ಎರಡು ತಿಂಗಳು ಬೇಸಿಗೆ ಇರುತ್ತದೆ. ಉದ್ಯೋಗಗಳನ್ನು ಹುಡುಕಿಕೊಂಡು ಜನ ಜಾನುವಾರುಗಳೊಂದಿಗೆ ಗುಳೆ ಹೊರಟಿದ್ದಾರೆ. ಇಂತಹ ಸಮಯದಲ್ಲಿ ಜನರಿಗೆ ಉದ್ಯೋಗ ನೀಡುವ ತುರ್ತು ಅಗತ್ಯವಿದೆ. ಸರಕಾರ ಈ ಬಗ್ಗೆ ಗಮನ ಹರಿಸಲಿ ಎಂದು ಅವರು ಹೇಳಿದರು.
ಬರಗಾಲದಂತಹ ಪರಿಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳ ವಾಸ್ತವ ಪರಿಸ್ಥಿತಿ ಕುರಿತು ಸಮಗ್ರವಾದ ಮಾಹಿತಿಯನ್ನು ಪಡೆದು, ಅದನ್ನು ಮುಖ್ಯಮಂತ್ರಿಯ ಗಮನಕ್ಕೆ ತರುವ ಕೆಲಸವನ್ನು ಮಾಡಬೇಕು. ಆದರೆ, ಈ ವಿಚಾರದಲ್ಲಿ ಸರಕಾರ ಎಡವಿರುವುದು ಕಾಣುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರಕಾರಕ್ಕೆ ಪತ್ರ ಬರೆದು ಹೆಚ್ಚಿನ ಆರ್ಥಿಕ ನೆರವನ್ನು ಪಡೆದು ಬರಪರಿಸ್ಥಿತಿಯನ್ನು ಸಮರೋಪಾದಿಯಲ್ಲಿ ಎದುರಿಸುವ ಕೆಲಸವನ್ನು ಮಾಡಬೇಕಿದೆ. ಆದ್ಯತೆ ಮೇರೆಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಒದಗಿಸಲಿ ಎಂದು ಕಾಗೋಡು ತಿಮ್ಮಪ್ಪ ಆಗ್ರಹಿಸಿದರು.







