ಎಐಯುಡಿಎಫ್ ಬೆಂಬಲವಿಲ್ಲದೆ ಯಾವುದೇ ಪಕ್ಷ ಅಸ್ಸಾಂನಲ್ಲಿ ಸರಕಾರ ರಚಿಸಲು ಸಾಧ್ಯವಿಲ್ಲ : ಬದ್ರುದ್ದೀನ್ ಅಜ್ಮಲ್

ಗುವಾಹಟಿ,ಮಾ, 18 : ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್(ಎಐಯುಡಿಎಫ್)ನ ಬೆಂಬಲವಿಲ್ಲದೆ ಯಾವ ಪಕ್ಷಕ್ಕೂ ಅಸ್ಸಾಂನಲ್ಲಿ ಸರಕಾರ ರಚಿಸಲು ಸಾಧ್ಯವಿಲ್ಲವೆಂದುಪಕ್ಷದ ಅಧ್ಯಕ್ಷ ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ತಮ್ಮ ಪಕ್ಷ ರಾಜ್ಯದಲ್ಲಿ ದಿನೇ ದಿನೇ ಪ್ರಬಲಗೊಳ್ಳುತ್ತಿರುವುದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳೆರಡಕ್ಕೂ ತಮ್ಮ ಫ್ರಂಟ್ ಬಗ್ಗೆ ಸ್ವಲ್ಪ ಮಟ್ಟಿನ ಭಯ ಮೂಡಿದೆ ಎಂದರು.ಅಸ್ಸಾಂ ರಾಜ್ಯವನ್ನು ಇನ್ನೊಂದು ಬಾಂಗ್ಲಾದೇಶವನ್ನಾಗಿಸಲು ಎಐಯುಡಿಎಫ್ ಹಾಗೂ ಕಾಂಗ್ರೆಸ್ ಪಕ್ಷಗಳು ಸಂಚು ಹೂಡಿವೆ ಎಂಬ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳ ಆರೋಪವು ಸಂಪೂರ್ಣವಾಗಿ ಸುಳ್ಳು ಎಂದು ಹೇಳಿದ ಅಜ್ಮಲ್‘‘ನಾವೇಕೆ ಕಾಂಗ್ರೆಸ್ ಪಕ್ಷದೊಂದಿಗೆ ಸಂಚು ಹೂಡಬೇಕು? ಅಕ್ರಮ ವಲಸಿಗರ ವಿಚಾರವನ್ನು ಜೀವಂತವಾಗಿಟ್ಟಿದ್ದು ಕಾಂಗ್ರೆಸ್,’’ಎಂದು ಹೇಳಿದರು.
ಮುಸ್ಲಿಂ ಜನಸಂಖ್ಯೆ ಸಾಕಷ್ಟಿಲ್ಲದ ಪ್ರದೇಶಗಳಲ್ಲಿಯೂ ಎಐಯುಡಿಎಫ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದರ ಹಿಂದೆ ಕಾಂಗ್ರೆಸ್ ಮತಗಳನ್ನು ಒಡೆದು ಬಿಜೆಪಿಗೆ ಸಹಾಯ ಮಾಡುವ ಉದ್ದೇಶವಿದೆಯೆಂಬ ಕಾಂಗ್ರೆಸ್ ಪಕ್ಷದ ಆಪಾದನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು‘‘ನಮಗೆ ಎಲ್ಲಾ 126 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಹಕ್ಕಿದೆ. ಬಿಜೆಪಿ ಅಥವಾ ಕಾಂಗ್ರೆಸ್ಸಿಗೆ ಸಹಾಯ ಮಾಡಿ ನಾವೇಕೆ ನಮ್ಮ ಸಮಯ ಹಾಗೂ ಶಕ್ತಿಯನ್ನು ವ್ಯರ್ಥಗೊಳಿಸಬೇಕು?’’ಎಂದವರು ಪ್ರಶ್ನಿಸಿದರು. ಉತ್ತರ ಅಸ್ಸಾಂನಲ್ಲಿ ತಮ್ಮ ಪಕ್ಷ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಎಂದು ಹೇಳಿದ ಅವರು ಚಹಾ ತೋಟಗಳ ಕಾರ್ಮಿಕರು ಹಾಗೂ ಕೆಲವುಬುಡಕಟ್ಟು ಜನಾಂಗದ ಸದಸ್ಯರು ತಮ್ಮ ಪಕ್ಷದ ಅಭ್ಯರ್ಥಿಗಳಾಗಲಿದ್ದಾರೆ, ಎಂದು ಮಾಹಿತಿ ನೀಡಿದರು.
ತಮ್ಮ ಪಕ್ಷ ಮಧ್ಯ ಅಸ್ಸಾಂನಲ್ಲಿ ಪ್ರಬಲವಾಗಿದೆಯೆಂದು ಹೇಳಿದ ಅವರುಉತ್ತರ ಅಸ್ಸಾಂನಲ್ಲೂ ಎರಡು ಸೀಟು ಗೆಲ್ಲುವ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಹಾಗೂ ಅಸ್ಸಾಂ ಗಣ ಪರಿಷತ್ ನಡುವಿನ ಮೈತ್ರಿಯ ಬಗ್ಗೆ ಮಾತನಾಡಿದ ಅವರು ಈ ಮೈತ್ರಿಯಿಂದ ಕಾಂಗ್ರೆಸ್ ಹೆಚ್ಚಿನ ಪ್ರಯೋಜನ ಪಡೆಯಲಿದೆಯೆಂದರು.
ಅಲ್ಪಸಂಖ್ಯಾತರ ಹಿತವನ್ನು ಕಾಯಲು ತಮ್ಮ ಪಕ್ಷ ಬದ್ಧವಾಗಿದೆಯೆಂದು ಹೇಳಿದ ಅಜ್ಮಲ್ ಅಕ್ರಮ ವಲಸಿಗರ ಬಗ್ಗೆ ಪ್ರಸ್ತಾಪಿಸುತ್ತಾ ರಾಜ್ಯವನ್ನು 1971ರ ಅನಂತರ ಅಕ್ರಮವಾಗಿ ಪ್ರವೇಶಿಸಿದವರೆಲ್ಲರೂ ಹೊರನಡೆಯಲೇಬೇಕು ಎಂದಿದ್ದಾರೆ.







