ಉಳ್ಳಾಲ: ಕಿನ್ಯ ಕೂಟು ಝಿಯಾರತ್ ಸಮಾರೋಪ

ಉಳ್ಳಾಲ: ಸುನ್ನತ್ ಜಮಾಅತ್‌ನಲ್ಲಿದ್ದುಕೊಂಡು ಇಸ್ಲಾಂನ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವಿಸಬೇಕೆಂದು ಮಂಜನಾಡಿ ಜುಮ್ಮಾ ಮಸೀದಿ ಮುದರ್ರಿಸ್ ಅಹ್ಮದ್ ಬಾಖವಿ ಕರೆ ನೀಡಿದರು.
ಅವರು ಕಿನ್ಯದಲ್ಲಿ ಶುಕ್ರವಾರ ನಡೆದ ಕೂಟು ಝಿಯಾರತ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣಗಾರರಾಗಿ ಭಾಗವಹಿಸಿ ಮಾತನಾಡಿದರು. ಪವಾಢ ಪುರುಷರಿಂದ ಅಭಿವೃದ್ಧಿ ಬಹಳಷ್ಟು ವೇಗದಲ್ಲಿ ಸಾಗುತ್ತದೆ. ಕಿನ್ಯ ಗ್ರಾಮ ಉನ್ನತ ಮಟ್ಟಕ್ಕೆ ಬೆಳೆಯಲು ಇಲ್ಲಿರುವ ದರ್ಗಾ ಮುಖ್ಯ ಕಾರಣ. ಇಲ್ಲಿ ದರ್ಗಾ ಇರುವ ಹಿನ್ನೆಲೆಯಲ್ಲಿ ಬಹಳಷ್ಟು ಧಾರ್ಮಿಕ ಕೇಂದ್ರಗಳು ಬೆಳೆಯುತ್ತಿವೆ. ಧಾರ್ಮಿಕ ಶಿಕ್ಷಣ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಧಾಮಿಕ ಕ್ಷೇತ್ರಗಳಿಗೆ ಗೌರವ ಕೊಡಬೇಕಾದ ಕೆಲಸ ನಮ್ಮದಾಗಿದೆ ಎಂದರು. ಕೂಟು ಝಿಯಾರತ್‌ನ ನೇತೃತ್ವನ್ನು ಮಂಗಳೂರು ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ವಹಿಸಿದ್ದರು. ಸಯ್ಯದ್ ಅಮೀರ್ ತಂಙಳ್ ದುವಾ ನೆರವೇರಿಸಿದರು. ಅಸ್ಸಯ್ಯಿದ್ ಬಾತಿಷ್ ತಂಙಳ್., ಕಿನ್ಯ ಜುಮಾ ಮಸೀದಿ ಮುದರ್ರಿಸ್ ಅಬೂಬಕರ್ ಅಲ್ ಕಾಸಿಮಿ, ಖತೀಬ್ ಖಾಸಿಂ ದಾರಿಮಿ, ಕುತುಬಿಯ್ಯ ಮದ್ರಸದ ಸದ್‌ರ್ ಫಾರೂಕ್ ದಾರಿಮಿ, ಜಿ.ಪಂ. ಮಾಜಿ ಸದಸ್ಯ ಎನ್ .ಎಸ್ ಕರೀಂ, ಮಂಜನಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ, ಮೊಯಿದಿನ್ ಕುಂಞಿ ಮಾರಾಠಿಮೂಲೆ, ಕಿನ್ಯ ಗ್ರಾ.ಪಂ. ಮಾಜಿ ಅಧ್ಯಕ್ಷ ಹುಸೈನ್ ಕುಂಞಿ ಹಾಜಿ, ಕಿನ್ಯ ಜುಮ್ಮ ಮಸೀದಿಯ ಉಪಾಧ್ಯಕ್ಷ ಬಶೀರ್ ಕಿನ್ಯ, ಕಾರ್ಯದರ್ಶಿ ಅಬೂಸಾಲಿ ಹಾಜಿ ಮೊದಲಾದವರು ಉಪಸ್ಥಿತರಿದ್ದರು. ಕಿನ್ಯ ಜುಮ್ಮಾ ಮಸೀದಿಯ ಅಧ್ಯಕ್ಷ ಸಾಧುಕುಂಙಿ ಮಾಸ್ಟರ್ ಅತಿಥಿಗಳನ್ನು ಸ್ವಾಗತಿಸಿದರು.





