ರಾಜ್ಯ ಬಜೆಟ್: ಬೆಂಗಳೂರು ಬ್ಯಾರಿ ಸೌಹಾರ್ದ ಭವನಕ್ಕೆ 3 ಕೋಟಿ ಅನುದಾನ
ಬೆಂಗಳೂರು, ಮಾ. 18: ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಬ್ಯಾರಿಗಳಿಗೆ ಶುಭ ಸುದ್ದಿಯಿದೆ. ಬೆಂಗಳೂರಿನಲ್ಲಿ ಬಹು ನಿರೀಕ್ಷಿತ ಅಭಿವೃದ್ಧಿ ಕೇಂದ್ರ ಬ್ಯಾರಿ ಸೌಹಾರ್ದ ಭವನ ನಿರ್ಮಾಣಕ್ಕೆ 3 ಕೋಟಿ ರೂಪಾಯಿ ಅನುದಾನವನ್ನು ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಲಾಗಿದೆ.
ಈ ಬ್ಯಾರಿ ಭವನ ನಿರ್ಮಾಣದ ಉಸ್ತುವಾರಿ ಹೊತ್ತಿರುವ ಬೆಂಗಳೂರಿನ ಬ್ಯಾರಿಸ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಬಿ . ಎಂ. ಫಾರೂಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
" ಬೆಂಗಳೂರಿನ ಎಚ್ ಬಿ ಆರ್ ಲೇ ಔಟ್ ನಲ್ಲಿ ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಬ್ಯಾರಿ ಭವನ ಸಮಗ್ರ ಅಭಿವೃದ್ಧಿ ಹಾಗು ಸೌಹಾರ್ದದ ಕೇಂದ್ರವಾಗಿ ಮೂಡಿಬರಲಿದೆ. ಕಳೆದ ವರ್ಷ ನವೆಂಬರ್ ನಲ್ಲಿ ಮುಖ್ಯಮಂತ್ರಿಯವರು ಶಿಲಾನ್ಯಾಸ ನೆರವೇರಿಸಿದ್ದು ಈಗಾಗಲೇ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ. ಸುಸಜ್ಜಿತ ತರಬೇತಿ ಕೇಂದ್ರ, ಹಾಸ್ಟೆಲ್ , ಸಮುದಾಯ ಭವನ ಇತ್ಯಾದಿಗಳು ಈ ಭಾವನದಲ್ಲಿರುತ್ತವೆ. ನಾವು ಕನಿಷ್ಠ 5 ಕೋಟಿ ರೂಪಾಯಿ ಅನುದಾನ ಸರಕಾರದಿಂದ ನೀಡಬೇಕೆಂದು ವಿನಂತಿಸಿದ್ದೆವು. ಈಗ ಸರಕಾರ 3 ಕೋಟಿ ರೂಪಾಯಿ ನೀಡಿದೆ. ಮುಂದಿನ ಹಂತದಲ್ಲಿ ಉಳಿದ 2 ಕೋಟಿ ರೂಪಾಯಿ ನೀಡಲು ಮತ್ತೆ ಮನವಿ ಮಾಡಿ ಪ್ರಯತ್ನಿಸುತ್ತೇವೆ " ಎಂದು ಫಾರೂಕ್ ಅವರು ಹೇಳಿದ್ದಾರೆ.