ನೆರವು ವಿತರಣೆಗೆ ಸರಕಾರದಿಂದ ನಿರ್ಬಂಧ: ವಿಶ್ವಸಂಸ್ಥೆ
ಸಿರಿಯ:
ಜಿನೇವ, ಮಾ. 18: ನೆರವು ವಾಹನಗಳು ಗುರುವಾರ ಸಿರಿಯದ ನಾಲ್ಕು ಪಟ್ಟಣಗಳನ್ನು ತಲುಪಿವೆ, ಆದರೆ ಈಗಲೂ ಮುತ್ತಿಗೆಗೊಳಗಾಗಿರುವ ಇತರ ಆರು ಪಟ್ಟಣಗಳಿಗೆ ನೆರವು ತಲುಪಲು ಸರಕಾರ ಅವಕಾಶ ನೀಡುತ್ತಿಲ್ಲ ಎಂದು ವಿಶ್ವಸಂಸ್ಥೆಯ ಮಾನವೀಯ ನೆರವು ಸಲಹೆಗಾರ ಜಾನ್ ಎಗಲಂಡ್ ಹೇಳಿದ್ದಾರೆ.
‘‘ನೆರವಿನ ಅಗತ್ಯವಿರುವ ಪಟ್ಟಣಗಳಿಗೆ ಹೋಗದಂತೆ ನಮ್ಮನ್ನು ತಡೆಯುವುದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ’’ ಎಂದು ಅವರು ಹೇಳಿದರು. ‘‘ನಾವು ಅಲ್ಲಿಗೆ ಯಾಕೆ ಹೋಗಬಾರದು ಎಂದು ನನಗೆ ಅರ್ಥವಾಗುತ್ತಿಲ್ಲ. ಅಂತಾರಾಷ್ಟ್ರೀಯ ಕಾನೂನಿನಡಿ ಗಾಯಗೊಂಡ ಹೋರಾಟಗಾರರಿಗೂ ಚಿಕಿತ್ಸೆ ಪಡೆಯುವ ಹಕ್ಕಿದೆ’’ ಎಂದರು.
ಅಗತ್ಯವಿರುವ ಜನರಿಗೆ ವೈದ್ಯಕೀಯ ನೆರವನ್ನು ನೀಡುವಲ್ಲಿ ಮುತ್ತಿಗೆಗಳು ತಡೆಯಾಗಿವೆ ಎಂದು ಅವರು ದೂರಿದರು.
‘‘ವೈದ್ಯಕೀಯ ಕ್ಷೇತ್ರದಲ್ಲಿ ಸಿರಿಯ ಸರಕಾರದ ಸಹಾಯ ನಮಗೆ ಅಗತ್ಯವಿದೆ. ಪೌಷ್ಟಿಕಾಂಶಯುಕ್ತ ಆಹಾರ, ವಿಟಮಿನ್, ಆ್ಯಂಟಿಬಯಾಟಿಕ್ಸ್, ವೈದ್ಯರು ಮತ್ತು ನರ್ಸ್‌ಗಳನ್ನು ಸರಕಾರ ಈ ಪಟ್ಟಣಗಳಿಗೆ ಯಾಕೆ ಕಳುಹಿಸುತ್ತಿಲ್ಲ? ಈ ಪರಿಸ್ಥಿತಿ ಸುಧಾರಣೆಯಾಗುತ್ತದೆಂದು ನಾವು ಭಾವಿಸಿದ್ದೇವೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.
ಇಲ್ಲಿ ಸಿರಿಯ ಶಾಂತಿ ಪ್ರಕ್ರಿಯೆಯಲ್ಲಿ ಒಳಗೊಂಡ ದೇಶಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಎಗಲಂಡ್, ಮಕ್ಕಳು ಸೇರಿದಂತೆ ಹಲವು ಅಮಾಯಕ ಸಿರಿಯನ್ನರು ಈಗಲೂ ಬಂಧನದಲ್ಲಿದ್ದಾರೆ ಎಂದರು. ಅವರನ್ನು ಬಿಡುಗಡೆಗೊಳಿಸುವಲ್ಲಿ ನೆರವಾಗುವಂತೆ ಅವರು ಅಮೆರಿಕ, ರಶ್ಯ ಮತ್ತು ಇತರ ದೇಶಗಳಿಗೆ ಕರೆ ನೀಡಿದರು.
ಝಬದಾನಿ, ಫೋವ, ಕೆಫ್ರಯ ಮತ್ತು ಮಡಯ ಪಟ್ಟಣಗಳಿಗೆ ಗುರುವಾರ ನೆರವು ಪೂರೈಸಲಾಗಿದೆ ಎಂದು ಅವರು ತಿಳಿಸಿದರು.





