ತಮಿಳುನಾಡಿನ ಹೊಸ ದೇವಾಲಯಕ್ಕೆ ದಲಿತರಿಗೆ ಪ್ರವೇಶ ನಿಷೇಧ
ತಿರುಪುರ, ಮಾ.18: ತಮಿಳುನಾಡಿನ ತಿರುಪುರದಲ್ಲಿ ಮೇಲ್ಜಾತಿಯ ಹಿಂದೂಗಳು ಹೊಸದಾಗಿ ನಿರ್ಮಿಸಲಾಗಿರುವ ಉತ್ತಮಪಾಳಯಂ ಮಾರಿಯಮ್ಮನ್ ದೇವಸ್ಥಾನದೊಳಗೆ 7 ಗ್ರಾಮಗಳ ದಲಿತರಿಗೆ ಪ್ರವೇಶ ನೀಡುತ್ತಿಲ್ಲ.
ಹಿಂದೂ ಧಾರ್ಮಿಕ-ದತ್ತಿ ಇಲಾಖೆಯ ಅಧೀನದ ಹಳೆಯ ದೇವಾಲಯ 2010ರಲ್ಲಿ ದಲಿತರು ಪ್ರವೇಶಿಸುವುದುದರಿಂದಾಗಿ ‘ಅಪವಿತ್ರ’ವಾಗಿತ್ತು. ಆದುದರಿಂದ ಅವರಿಗೆ ಹೊಸ ದೇವಾಲಯದೊಳಗೆ ಪ್ರವೇಶ ನೀಡುವುದಿಲ್ಲವೆಂಬುದು ಮೇಲ್ಜಾತಿಯವರ ವಾದವಾಗಿದೆ. ತಮಿಳುನಾಡಿನಲ್ಲಿ 1960ರಲ್ಲಿ ಹಿಂದೂ ಧಾರ್ಮಿಕ-ದತ್ತಿ ಇಲಾಖೆ ರಚನೆಯಾಗಿದೆ.
ಉತ್ತಮಪಾಳಯದ ಹಳೆಯ ದೇವಾಲಯ 1964ರಲ್ಲಿ ನಿರ್ಮಿಸಲಾಗಿತ್ತು. ಮೇಲ್ಜಾತಿಯ ಹಿಂದೂಗಳು ಇದೀಗ ‘ಮಾರಿಯಮ್ಮನ್ ಕೋವಿಲ್ ಟ್ರಸ್ಟ್’ನ ಅಧೀನದಲ್ಲಿ ಹೊಸ ದೇವಾಲಯವನ್ನು ನಿರ್ಮಿಸಿದ್ದಾರೆ. ಧಾರ್ಮಿಕ-ದತ್ತಿ ಇಲಾಖೆಯ ಅಧೀನದಲ್ಲಿ ಈಗಿರುವ ದೇವಾಲಯದ ಹೆಸರಿನಲ್ಲಿರುವ ಟ್ರಸ್ಟ್‌ನ ಕಾನೂನು ಬದ್ಧತೆಯ ಪ್ರಶ್ನೆಯ ಕಾರಣಕ್ಕಾಗಿ ಅವರು ಟ್ರಸ್ಟ್‌ನ ಹೆಸರನ್ನು ‘ಪುದು ಮಾರಿಯಮ್ಮನ್ ಕೋವಿಲ್ ಟ್ರಸ್ಟ್’ ಎಂದು ಬದಲಾಯಿಸಿದ್ದಾರೆ.
11ಮಂದಿ ಸದಸ್ಯರ ಟ್ರಸ್ಟ್‌ನಲ್ಲಿ ದಲಿತರಾರೂ ಇಲ್ಲ. ಹೊಸ ದೇವಾಲಯದ ಸಮರ್ಪಣಾ ಸಮಾರಂಭದಲ್ಲಿ ಭಾಗವಾಹಿಸಲು ಯತ್ನಿಸಿದ ದಲಿತರ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ. ದಾಳಿಕೋರರ ಮೇಲೆ ಎಸ್ಸಿ-ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದ್ದು 149 ಮಂದಿ ದಲಿತರಿಗೆ ಜಿಲ್ಲಾಡಳಿತವು ಪರಿಹಾರ ನೀಡಿದೆಯೆಂದು ದಿನಪತ್ರಿಕೆಯೊಂದು ವರದಿ ಮಾಡಿದೆ.
ಕೇವಲ ಒಬ್ಬನಿಗೆ ರೂ.1ಲಕ್ಷ ನೀಡಲಾಗಿದ್ದು ಉಳಿದವರಿಗೆ ತಲಾ ರೂ.12,500 ಕೊಡಲಾಗಿದೆ. ಎಲ್ಲ ಸಂತ್ರಸ್ತರಿಗೂ ಸಮಾನ ಮೊತ್ತದ ಹಣ ನೀಡುವಂತೆ ಉತ್ತಮ ಪಾಳಯಂ ದೇವಾಲಯ ಪ್ರವೇಶ ಚಳವಳಿ ಸಮಿತಿಯ ಸಂಚಾಲಕ ಹಾಗೂ ದಲಿತ ಮುಕ್ತಿ ಚಳವಳಿಯ ರಾಜ್ಯ ಜಂಟಿ ಮಹಾ ಕಾರ್ಯದರ್ಶಿ ಎಸ್. ಕುರುಪ್ಪಯ್ಯನವರನ್ನುಲ್ಲೇಖಿಸಿ ಅದು ಹೇಳಿದೆ.
ಉತ್ತಮಪಾಳಯಂ, ವೇಲಪಾಳಯಂ, ತಾಸವನಾಯಕನ್ ಪಟ್ಟಿ, ನಾಗನಾಯಕನ್ ಪಟ್ಟಿ, ತೆಂಕಾಳಿಪಾಳಯಂ, ಕಾಟ್ಟುಪಾಳಯಂ ಹಾಗೂ ತಲಕ್ಕಾರೈ ಗ್ರಾಮಗಳ ದಲಿತರಿಗೆ ನಿರ್ಮಾಣವಾಗಿ ದಶಮಾನಗಳ ಬಳಿಕ ಹಳೆಯ ದೇವಾಲಯದೊಳಗೆ ಪ್ರವೇಶದ ಹಕ್ಕು ಲಭಿಸಿತ್ತೆಂದು ‘ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.





