ಶರತ್ತುಗಳ ಆಧಾರದಲ್ಲಿ ಕಾಶ್ಮೀರದಲ್ಲಿ ಸರಕಾರ ರಚಿಸಲು ಅಸಾಧ್ಯ: ಬಿಜೆಪಿ
ಹೊಸದಿಲ್ಲಿ, ಮಾ.18: ಜಮ್ಮುಕಾಶ್ಮೀರದಲ್ಲಿ ಸರಕಾರ ರಚನೆಗಾಗಿ ಪಿಡಿಪಿ ತನ್ನ ಮುಂದಿಟ್ಟಿರುವ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಬಿಜೆಪಿ ಶುಕ್ರವಾರ ನಿರಾಕರಿಸಿದೆ. ಶರತ್ತುಗಳ ಆಧಾರದಲ್ಲಿ ರಾಜ್ಯದಲ್ಲಿ ಸರಕಾರ ರಚಿಸಲು ಸಾಧ್ಯವಿಲ್ಲವೆಂದು ಹೇಳಿದೆ.
‘‘ಯಾವುದೇ ಹೊಸ ಬೇಡಿಕೆಯನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ. ಪಿಡಿಪಿಗೆ ಯಾವುದೇ ನಿರೀಕ್ಷೆಗಳಿದ್ದರೂ, ಅವುಗಳನ್ನು ಸರಕಾರ ರಚನೆಯ ಬಳಿಕವಷ್ಟೇ ಈಡೇರಿಸಲು ಸಾಧ್ಯವಾಗಬಹುದು’’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್‌ಮಾಧವ್ ಶುಕ್ರವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಗುರುವಾರ ಹೊಸದಿಲ್ಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ಶಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಜಮ್ಮುಕಾಶ್ಮೀರದಲ್ಲಿ ಸರಕಾರ ರಚನೆಯಲ್ಲಿ ಉಂಟಾಗಿರುವ ಅತಂತ್ರಸ್ಥಿತಿಗೆ ಕಾರಣ ಪಿಡಿಪಿಯೇ ಹೊರತು ಬಿಜೆಪಿಯಲ್ಲವೆಂದು ಮಾಧವ್ ಸ್ಪಷ್ಟಪಡಿಸಿದರು. ‘‘ಜಮ್ಮುಕಾಶ್ಮೀರದ ಲ್ಲಿ ಪ್ರಸ್ತುತ ಉಂಟಾಗಿರುವ ಪರಿಸ್ಥಿತಿಗೆ ನಾವು ಕಾರಣರಲ್ಲ. ಮುಫ್ತಿ ಸಾಹೇಬ್‌ರ ನಿಧನದ ಬಳಿಕ ಪಿಡಿಪಿಯು ಮುಖ್ಯಮಂತ್ರಿ ಹುದ್ದೆಗೆ ತನ್ನ ನಾಯಕರೊಬ್ಬರನ್ನು ಆಯ್ಕೆ ಮಾಡಬೇಕಿತ್ತು ’’ಎಂದವರು ಹೇಳಿದರು.
ಜಮ್ಮುಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಅಹ್ಮದ್ ಸಯೀದ್ ಕಳೆದ ಜನವರಿಯಲ್ಲಿ ನಿಧನರಾದ ಬಳಿಕ, ಅವರ ಪುತ್ರಿ ಮೆಹಬೂಬಾ ಮುಫ್ತಿ ಸರಕಾರ ರಚನೆಗೆ ನಿರಾಕರಿಸಿದ ಬಳಿಕ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿದೆ.





