ಬಜೆಟ್ ಮಂಡನೆ ವೇಳೆ ಎರಡು ಬಾರಿ ಪವರ್ ಕಟ್!

ಬೆಂಗಳೂರು, ಮಾ. 18: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2016-17ನೆ ಸಾಲಿನ ಮಹತ್ವದ ಮುಂಗಡ ಪತ್ರ ಮಂಡನೆ ಮಾಡುತ್ತಿದ್ದ ವೇಳೆ ಎರಡು ಬಾರಿ ವಿದ್ಯುತ್ ಕಣ್ಣಾಮುಚ್ಚಾಲೆಯನ್ನಾಡಿದ್ದು ಖುದ್ದು ಸಿದ್ದರಾಮಯ್ಯನವರನ್ನೇ ಕ್ಷಣಕಾಲ ವಿಚಲಿತರನ್ನಾಗಿಸಿತು.
ಶುಕ್ರವಾರ ವಿಧಾನಸಭೆಯಲ್ಲಿ ತಮ್ಮ ಸುದೀರ್ಘ ಆಯವ್ಯಯ ಮಂಡನೆ ಮಧ್ಯೆ ಮಧ್ಯಾಹ್ನ 1:50ರ ಸುಮಾರಿಗೆ ಹಠಾತ್ತನೆ ವಿದ್ಯುತ್ ಕೈಕೊಟ್ಟಿತು. ಕ್ಷಣಾರ್ಧದಲ್ಲೇ ಪುನಃ ವಿದ್ಯುತ್ ಬಂತು. ಆ ಬಳಿಕ 2ಗಂಟೆಯ ಸುಮಾರಿಗೆ ಮತ್ತೊಮ್ಮೆ ಸುಮಾರು 1 ನಿಮಿಷಕ್ಕೂ ಹೆಚ್ಚು ಕಾಲ ವಿದ್ಯುತ್ ಕಡಿತಗೊಂಡಿದ್ದರಿಂದ ಸಿದ್ದರಾಮಯ್ಯ ಕ್ಷಣಕಾಲ ಬೆಚ್ಚಿಬಿದ್ದರು.
ಈ ಮಧ್ಯೆ ಮಾಷಲ್‌ವೊಬ್ಬರು ಕ್ಯಾಂಡಲ್‌ವೊಂದನ್ನು ಹಚ್ಚಲು ಮುಂದಾದ ಪ್ರಸಂಗವೂ ನಡೆಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಬಳಿ ಅಧಿಕಾರಿಗಳ ಗ್ಯಾಲರಿಯಲ್ಲಿ ಆಸೀನರಾಗಿದ್ದ ಅಧಿಕಾರಿಗಳನ್ನು ಕಣ್ಣಲ್ಲೆ ಗದರಿಸಿದ ಪ್ರಸಂಗವೂ ನಡೆಯಿತು.
ಇದೇ ವೇಳೆ ಎದ್ದುನಿಂತ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ‘ಸರಕಾರದ ಕಾರ್ಯವೈಖರಿಗೆ ಇದು ಸಾಕ್ಷಿ. ರಾಜ್ಯದಲ್ಲಿ ಕತ್ತಲೆ ಭಾಗ್ಯ ಕರುಣಿಸಲಾಗಿದೆ. ವಿಧಾನಸೌಧದಲ್ಲೆ ಈ ಪರಿಸ್ಥಿತಿ ಇರಬೇಕಾದರೆ ಗ್ರಾಮೀಣ ಪ್ರದೇಶದ ಸ್ಥಿತಿ ಹೇಗಿರಬೇಡ’ ಎಂದು ಸರಕಾರವನ್ನು ಛೇಡಿಸಿದರು.
ಇಂಜಿನಿಯರ್ ಅಮಾನತು
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಮಂಡಿಸುವಾಗ ವಿದ್ಯುತ್ ಕೈ ಕೊಟ್ಟು ಕ್ಷಣಕಾಲ ವಿಚಲಿತರಾಗುವಂತಾಯಿತು, ವಿರೋಧಪಕ್ಷಗಳು ಸರಕಾರವನ್ನು ಗೇಲಿ ಮಾಡಿದ್ದು, ಇಂಧನ ಮಂತ್ರಿ ಟೀಕೆ ಎದುರಿಸುವಂತಾಗಿದ್ದು ಸರಕಾರಕ್ಕೆ ಮುಜುಗರವನ್ನುಂಟುಮಾಡಿತ್ತು. ಈ ಸಂಬಂಧ ವಿಧಾನಸೌಧದ ವಿದ್ಯುತ್ ಉಸ್ತುವಾರಿ ಹೊತ್ತ ಎಂಜಿನಿಯರ್ ಅವರನ್ನು, ಕರ್ತವ್ಯಲೋಪದ ಆರೋಪದಡಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.







