ಇ-ಆಡಳಿತ ಇಲಾಖೆಗೆ 115 ಕೋಟಿ ರೂ.
ರಾಜ್ಯ ಬಜೆಟ್ 2016-17
ಇ-ಆಡಳಿತ ಇಲಾಖೆಗೆ ಒಟ್ಟಾರೆಯಾಗಿ 115 ಕೋಟಿ ರೂ.ಒದಗಿಸಲಾಗಿದೆ.
ಬೆಂಗಳೂರು ನಗರದ ಪ್ರತಿಯೊಂದು ವಾರ್ಡ್ ನಲ್ಲಿ ಬೆಂಗಳೂರು ಒನ್ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಇದಕ್ಕೆ 33 ಕೇಂದ್ರಗಳನ್ನು ಗುರುತಿಸಲಾಗಿದೆ. ಈ ಕೇಂದ್ರಗಳಲ್ಲಿ ಶೀಘ್ರದಲ್ಲಿಯೇ ಸೇವೆಯನ್ನು ಪ್ರಾರಂಭಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ನೂತನ ಇ-ಆಡಳಿತ ಯೋಜನೆಗಳಿಗೆ ಧನಸಹಾಯ ನೀಡಲಾಗುವುದು. ನಾಗರಿಕ ಸ್ನೇಹಿ ಇ-ಆಡಳಿತ ಯೋಜನೆಗಳನ್ನು ರಾಜ್ಯ ಮಟ್ಟದಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಇಲಾಖೆಗಳು, ಸಂಸ್ಥೆಗಳಿಗೆ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ.
ಇ-ಆಡಳಿತ ಕೇಂದ್ರದ ಮಾಹಿತಿ ತಂತ್ರಜ್ಞಾನದ ಎಲ್ಲಾ ರಕ್ಷಣಾ ಚಟುವಟಿಕೆಗಳನ್ನು ಮಾಹಿತಿ ತಂತ್ರಜ್ಞಾನದ ಪ್ರಮಾಣಗಳಿಗೆ ಅನುಗುಣವಾಗಿ ಬಲವರ್ಧಿಸಿ ಮುಂಬರುವ ವಿಸ್ತರಣೆಗೂ ಅನುವು ಮಾಡಲು ಸೆಕ್ಯೂರಿಟಿ ಆಪರೇಷನಲ್ ಸೆಂಟರ್ ಸ್ಥಾಪಿಸಲು ಉದ್ದೇಶಿಸಲಾಗಿದೆ.
ಸಿಡಿಎಸಿ ಸಂಸ್ಥೆಯು ಅಭಿವೃದ್ಧಿಗೊಳಿಸಿದ ಭಾಷಾಂತರ ಮತ್ತು ಭಾಷಾ ಅಭಿವ್ಯಕ್ತತೆಯ ತಂತ್ರಾಂಶದ ಪ್ರಯೋಗ ನಡೆಸಿ ಅದನ್ನು ಅಳವಡಿಸಿಕೊಳ್ಳಲಾಗುವುದು.ಕೇಂದ್ರ ಸರಕಾರವು ರಾಜ್ಯ ಸರಕಾರಗಳ ಸಹಯೋಗದೊಂದಿಗೆ 1997ರಿಂದ ಪ್ರತಿ ವರ್ಷ ರಾಷ್ಟ್ರೀಯ ಇ-ಆಡಳಿತ ಸಮ್ಮೇಳನವನ್ನು ನಡೆಸುತ್ತಿದ್ದು, ಈ ವರ್ಷ ಅದರ 20ನೆ ಅಧಿವೇಶನವನ್ನು ಫೆಬ್ರವರಿ 2017ರಲ್ಲಿ ರಾಜ್ಯದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ.







