ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯಕ್ಕೆ ಈಡನ್‌ಗಾರ್ಡನ್ ಸಜ್ಜು

ಕೋಲ್ಕತಾ, ಮಾ.18: ದೇಶ-ವಿದೇಶದ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಭಾರತ-ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕೆ ಐತಿಹಾಸಿಕ ಈಡನ್‌ಗಾರ್ಡನ್ಸ್ ಸ್ಟೇಡಿಯಂ ಸಜ್ಜಾಗಿದೆ. ಶನಿವಾರ ನಡೆಯಲಿರುವ ಮಹತ್ವದ ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್‌ನ ಸೂಪರ್-10ರ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗಾಗಿ ಹೋರಾಡಲಿವೆ.
ಆತಿಥೇಯ ಭಾರತ ತಂಡ ಮಂಗಳವಾರ ನಾಗ್ಪುರದಲ್ಲಿ ನಡೆದ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್‌ನ ತ್ರಿವಳಿ ಸ್ಪಿನ್ನರ್‌ಗಳಾದ ಮಿಚೆಲ್ ಸ್ಯಾಂಟ್ನರ್, ಐಶ್ ಸೋಧಿ ಹಾಗೂ ನಥನ್ ಮೆಕಲಮ್ ದಾಳಿಗೆ ಸಿಲುಕಿ ಆಘಾತಕಾರಿ ಸೋಲನುಭವಿಸಿತ್ತು.
ಮತ್ತೊಂದೆಡೆ, ಪಾಕಿಸ್ತಾನ ತಂಡ ನಾಯಕ ಶಾಹಿದ್ ಅಫ್ರಿದಿ ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ಬಾಂಗ್ಲಾದೇಶ ತಂಡವನ್ನು ಹೀನಾಯವಾಗಿ ಸೋಲಿಸಿ ಕೆಲವೇ ವಾರಗಳ ಹಿಂದೆ ಏಷ್ಯಾಕಪ್‌ನಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿತ್ತು.
ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ತಂಡಗಳು ನಾಕೌಟ್ ಹಂತಕ್ಕೆ ಅರ್ಹತೆ ಪಡೆಯಲು ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ಸಾಧಿಸಲೇಬೇಕು. ಈಗಾಗಲೇ ಒಂದು ಪಂದ್ಯವನ್ನು ಸೋತಿರುವ ಭಾರತ ಮತ್ತೊಂದು ಪಂದ್ಯದಲ್ಲಿ ಸೋತರೆ ಮುಂದಿನ ಸುತ್ತಿಗೇರುವ ಹಾದಿ ಕಠಿಣವಾಗಲಿದೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಮೂರನೆ ಅತ್ಯಂತ ಕನಿಷ್ಠ ಮೊತ್ತಕ್ಕೆ ಆಲೌಟ್ ಮಾಡಿ ಸುಲಭ ಗೆಲುವು ಸಾಧಿಸಿತ್ತು. ಮುಹಮ್ಮದ್ ಆಮಿರ್ ಅದ್ಭುತ ಬೌಲಿಂಗ್ ಮಾಡಿದ್ದರೂ ಪಾಕ್‌ಗೆ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ.
ಪಾಕ್‌ಗೆ ಈಡನ್ ಅದೃಷ್ಟದ ಅಂಗಣ: ಪಾಕಿಸ್ತಾನ ತಂಡಕ್ಕೆ ಈಡನ್‌ಗಾರ್ಡನ್ಸ್ ಅದೃಷ್ಟದ ಅಂಗಣವಾಗಿದೆ. ಉಭಯ ತಂಡಗಳು ಈಡನ್‌ನಲ್ಲಿ ಮೊದಲ ಬಾರಿ ಟ್ವೆಂಟಿ-20 ಪಂದ್ಯವನ್ನು ಆಡುತ್ತಿವೆ. ಆದರೆ, ಈ ಮೊದಲು ಆಡಿರುವ ನಾಲ್ಕು ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿತ್ತು. ಭಾರತ ಒಂದೂ ಗೆಲುವು ಸಾಧಿಸಿಲ್ಲ. ಆದರೆ, ಐಸಿಸಿಯಿಂದ ಆಯೋಜಿಸಲ್ಪಡುವ ವಿಶ್ವಕಪ್ ಟೂರ್ನಿಗಳಲ್ಲಿ ಪಾಕ್ ತಂಡ ಭಾರತವನ್ನು ಈ ತನಕ ಸೋಲಿಸಿಲ್ಲ. ಶನಿವಾರ ನಡೆಯಲಿರುವ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಹಾಗೂ ಪಾಕಿಸ್ತಾನದ ಬೌಲರ್‌ಗಳ ನಡುವೆ ಪೈಪೋಟಿ ಏರ್ಪಡಲಿದೆ.
ಟೀಮ್ ನ್ಯೂಸ್: ಸಿಡ್ನಿಯಲ್ಲಿ ನಡೆದಿದ್ದ ಆಸ್ಟ್ರೇಲಿಯ ವಿರುದ್ಧದ ಮೂರನೆ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಔಟಾಗದೆ 49 ರನ್ ಗಳಿಸಿದ ಬಳಿಕ ಸುರೇಶ್ ರೈನಾ ದೊಡ್ಡ ಸ್ಕೋರ್ ದಾಖಲಿಸಿಲ್ಲ. ರೈನಾ ನೆಟ್ ಪ್ರಾಕ್ಟೀಸ್‌ನ ವೇಳೆ ಶಾರ್ಟ್ ಬಾಲ್ ಎಸೆತದಲ್ಲಿ ಹೆಚ್ಚು ಅಭ್ಯಾಸ ನಡೆಸಿದರು. ಭಾರತದ ಬೌಲರ್‌ಗಳಲ್ಲಿ ಆಫ್ ಸ್ಪಿನ್ನರ್ ಆರ್.ಅಶ್ವಿನ್, ಹಿರಿಯ ಬೌಲರ್ ಆಶೀಷ್ ನೆಹ್ರಾ ಹಾಗೂ ಯುವ ಬೌಲರ್ ಜಸ್‌ಪ್ರೀತ್ ಬುಮ್ರಾ ಪಾಕ್ ದಾಂಡಿಗರಿಗೆ ಸವಾಲಾಗಬಲ್ಲರು.
ಪಾಕಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ ಆಡಿದ್ದ ತಂಡವನ್ನೇ ಶನಿವಾರ ಕಣಕ್ಕಿಳಿಸುವ ಸಾಧ್ಯತೆಯಿದೆ. ಇತ್ತೀಚೆಗಿನ ದಿನಗಳಲ್ಲಿ ಪಾಕಿಸ್ತಾನ ತಂಡ ಬ್ಯಾಟಿಂಗ್ ವೈಫಲ್ಯ ಕಾಣುತ್ತಾ ಬಂದಿದೆ. ಆದರೆ, ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಅಹ್ಮದ್ ಶೆಹಝಾದ್ ಹಾಗೂ ಮುಹಮ್ಮದ್ ಹಫೀಝ್ ಅರ್ಧಶತಕ ಬಾರಿಸಿದ್ದರು. ನಾಯಕ ಶಾಹಿದ್ ಅಫ್ರಿದಿ 19 ಎಸೆತಗಳಲ್ಲಿ 49 ರನ್ ಬಾರಿಸಿ ತಂಡದ ಸ್ಕೋರ್ 200ರ ಗಡಿ ದಾಟಲು ನೆರವಾಗಿದ್ದರು.
ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಮೂವರು ವೇಗಿಗಳನ್ನು ದಾಳಿಗಿಳಿಸುವ ಸಾಧ್ಯತೆಯಿದೆ. ಏಷ್ಯಾಕಪ್‌ನಲ್ಲಿ ಭಾರತವನ್ನು ಕಾಡಿದ್ದ ಎಡಗೈ ವೇಗಿ ಆಮಿರ್ ಮತ್ತೊಮ್ಮೆ ಆತಿಥೇಯರಿಗೆ ಸವಾಲಾಗಲು ಎದುರು ನೋಡುತ್ತಿದ್ದಾರೆ.
2016ರ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಭಾರತ-ಪಾಕ್
ಭಾರತ: 12 ಪಂದ್ಯ, 10 ಗೆಲುವು, 2 ಸೋಲು
ಪಾಕಿಸ್ತಾನ: 8 ಪಂದ್ಯ, 4 ಗೆಲುವು, 4 ಸೋಲು
ಅಂಕಿ-ಅಂಶ:
*ಪಾಕಿಸ್ತಾನ ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ಭಾರತ ವಿರುದ್ಧ ಆಡಿರುವ 4 ಏಕದಿನ ಪಂದ್ಯಗಳ ಪೈಕಿ ನಾಲ್ಕರಲ್ಲೂ ಗೆಲುವು ಸಾಧಿಸಿದೆ. ಆದರೆ, ವಿಶ್ವಕಪ್ ಟೂರ್ನಿಯಲ್ಲಿ ಭಾರತವನ್ನು ಈ ತನಕ ಸೋಲಿಸಿಲ್ಲ.
* ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಪಾಕ್ ವಿರುದ್ಧ 7 ಪಂದ್ಯಗಳನ್ನು ಆಡಿರುವ ಭಾರತ ಐದರಲ್ಲಿ ಜಯ ಸಾಧಿಸಿದೆ. ಒಂದರಲ್ಲಿ ಸೋಲು, ಮತ್ತೊಂದರಲ್ಲಿ ಟೈ ಸಾಧಿಸಿದೆ.
*ವಿಶ್ವಕಪ್ ಟೂರ್ನಿ(50 ಹಾಗೂ 20 ಓವರ್)ಯಲ್ಲಿ ಪಾಕ್ ವಿರುದ್ಧ 10 ಪಂದ್ಯಗಳನ್ನು ಆಡಿರುವ ಭಾರತ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿದೆ.
*ಭಾರತ ಒಂದು ವೇಳೆ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಸೋತರೆ ನಾಕೌಟ್ ಹಂತಕ್ಕೇರುವ ದಾರಿ ಕಠಿಣವಾಗಲಿದೆ.
ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ
ಪಾಕ್ ವಿರುದ್ಧ ಭಾರತ 4 ಟ್ವೆಂಟಿ-20 ವಿಶ್ವಕಪ್ ಪಂದ್ಯಗಳಲ್ಲಿ ಜಯ ಸಾಧಿಸಿದೆ. 2007ರ ಚೊಚ್ಚಲ ವಿಶ್ವಕಪ್‌ನ ಲೀಗ್ ಪಂದ್ಯದ ಟೈ ಆದಾಗ ಬೌಲ್-ಔಟ್‌ನಲ್ಲಿ ಭಾರತ ಜಯ ಸಾಧಿಸಿತ್ತು. ಅದೇ ಟೂರ್ನಿಯ ಫೈನಲ್‌ನಲ್ಲಿ ಭಾರತ-ಪಾಕ್ ಮತ್ತೊಮ್ಮೆ ಮುಖಾಮುಖಿಯಾದಾಗ ಭಾರತ 5 ರನ್‌ನಿಂದ ಗೆಲುವು ಸಾಧಿಸಿ ವಿಶ್ವ ಚಾಂಪಿಯನ್ ಆಗಿತ್ತು.
2012ರ ಆವೃತ್ತಿಯಲ್ಲಿ 8 ವಿಕೆಟ್‌ಗಳ ಅಂತರದಿಂದ ಹಾಗೂ 2014ರ ಆವೃತ್ತಿಯಲ್ಲಿ 7 ವಿಕೆಟ್ ಅಂತರದ ಗೆಲುವು ಸಾಧಿಸಿತ್ತು.
ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ ಒಟ್ಟು 199 ರನ್ ಗಳಿಸಿದ್ದಾರೆ. ಕಳೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಔಟಾಗದೆ 78 ಹಾಗೂ 36 ರನ್ ಗಳಿಸಿದ್ದಾರೆ.
ವಿಶ್ವಕಪ್‌ನಲ್ಲಿ ಪಾಕ್ ಬೌಲರ್‌ಗಳೇ ಪ್ರಾಬಲ್ಯ ಸಾಧಿಸಿದ್ದಾರೆ. 2007ರ ವಿಶ್ವಕಪ್‌ನಲ್ಲಿ ಮುಹಮ್ಮದ್ ಆಸಿಫ್(4-18) ಹಾಗೂ 2012ರ ವಿಶ್ವಕಪ್‌ನಲ್ಲಿ ಉಮರ್ ಗುಲ್(4-37) ಅತ್ಯುತ್ತಮ ಬೌಲಿಂಗ್ ನಡೆಸಿದ್ದರು. ಭಾರತದ ಪರ ಹಾರ್ದಿಕ್ ಪಾಂಡ್ಯ(3-8) ಶ್ರೇಷ್ಠ ಬೌಲಿಂಗ್ ಮಾಡಿದ್ದಾರೆ.
‘‘ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಆ್ಯಶಸ್ ಸರಣಿಗಿಂತಲೂ ದೊಡ್ಡದು. ನಮ್ಮ ತಂಡಕ್ಕೆೆ ಟೂರ್ನಿಯ ಮೊದಲ ಪಂದ್ಯದ ಸೋಲಿನಿಂದ ಹೊರ ಬರುವ ವಿಶ್ವಾಸವಿದೆ’’
ಆರ್.ಅಶ್ವಿನ್, ಭಾರತದ ಆಫ್ ಸ್ಪಿನ್ನರ್.
‘‘ಇತಿಹಾಸ ಬದಲಾಗುತ್ತದೆ. ನಮ್ಮ ತಂಡದಲ್ಲಿ ಶ್ರೇಷ್ಠ ವೇಗದ ಬೌಲರ್‌ಗಳಿದ್ದು, ವೇಗಿಗಳು ಒಂದೇ ಸ್ಪೆಲ್ ಅಥವಾ ಒಂದೇ ಓವರ್‌ನಲ್ಲಿ ಪಂದ್ಯದ ದಿಕ್ಕನ್ನು ಬದಲಿಸಬಲ್ಲರು. ಕೋಲ್ಕತಾ ನಮ್ಮ ಪಾಲಿನ ಅದೃಷ್ಟದ ಮೈದಾನವಾಗಿದೆ’’
ವಕಾರ್ ಯೂನಿಸ್, ಪಾಕಿಸ್ತಾನದ ಕೋಚ್.
ತಂಡಗಳು:ಭಾರತ: ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಯುವರಾಜ್ ಸಿಂಗ್, ಎಂಎಸ್ ಧೋನಿ(ನಾಯಕ/ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಆರ್.ಅಶ್ವಿನ್, ಜಸ್‌ಪ್ರಿತ್ ಬುಮ್ರಾ, ಆಶೀಷ್ ನೆಹ್ರಾ.
ಪಾಕಿಸ್ತಾನ: ಶಾರ್ಜಿಲ್ ಖಾನ್, ಅಹ್ಮದ್ ಶಹಝಾದ್, ಮುಹಮ್ಮದ್ ಹಫೀಝ್, ಶಾಹಿದ್ ಅಫ್ರಿದಿ(ನಾಯಕ), ಉಮರ್ ಅಕ್ಮಲ್, ಶುಐಬ್ ಮಲಿಕ್, ಸರ್ಫರಾಝ್ ಅಹ್ಮದ್(ವಿಕೆಟ್‌ಕೀಪರ್), ಇಮಾದ್ ವಸೀಂ, ವಹಾಬ್ ರಿಯಾಝ್, ಮುಹಮ್ಮದ್ ಆಮಿರ್, ಮುಹಮ್ಮದ್ ಇರ್ಫಾನ್.
ಪಂದ್ಯ ಆರಂಭದ ಸಮಯ: ರಾತ್ರಿ 7:30







