ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ: 17,373 ಕೋಟಿ ರೂ.ಅನುದಾನ
ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಲು ತಂತ್ರಜ್ಞಾನ ಆಧಾರಿತ ಕಲಿಕೆ, ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಸಮಂಜಸವಾದ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ನೆರನಿಂದ ಸರಕಾರಿ ಶಾಲೆಯಲ್ಲಿರುವ ವಿದ್ಯಾರ್ಥಿಗಳ ಹಾಗೂ ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಶಾಲೆಗಳಿಗೆ ದಾಖಲಾದ ವಿದ್ಯಾರ್ಥಿಗಳ ಕಲಿಕೆಯಲ್ಲಿನ ಸಾಧನೆಯ ಮೇಲ್ವಿಚಾರಣೆ.
‘ನಲಿ ಕಲಿ’ ವಿಧಾನವನ್ನು ಪುನರ್‌ರೂಪಿಸಿ, ಸಮಗ್ರವಾಗಿ ಜಾರಿಗೊಳಿಸು ವುದು. ಗಣಿತ ವಿಷಯದ ಚಟುವಟಿಕೆ ಆಧಾರಿತ ಕಲಿಕೆಯನ್ನು 4 ಮತ್ತು 5ನೆ ತರಗತಿಗಳಿಗೂ ವಿಸ್ತರಣೆ. ಸರಕಾರಿ ಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ರಜೆಯಲ್ಲಿ ಪೂರಕ ಬೋಧನೆಯ ವ್ಯವಸ್ಥೆ ಮಾಡುವುದು. ಸರಕಾರಿ ಪ್ರೌಢಶಾಲೆಗಳಲ್ಲಿನ ಎಲ್ಲ್ಲ ವಿದ್ಯಾರ್ಥಿಗಳಿಗೆ ಡಿಜಿಟಲ್ ಸಾಕ್ಷರತೆಯನ್ನು ಒದಗಿಸಲು ಪ್ರೌಢ ಶಾಲಾ ಶಿಕ್ಷಕರ ಮೂಲಕ ಸಮಗ್ರವಾದ ಇ-ವಿಷಯಾಧಾರಿತ ‘ಐಟಿಸ್ಕೂಲ್ಸ್ ಇನ್ ಕರ್ನಾಟಕ’ ಕಾರ್ಯಕ್ರಮವನ್ನು ಪ್ರಾರಂಭಿಸುವುದು.
ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಸ್ಥಾನಮಾನಕ್ಕಾಗಿ ಮಾನ್ಯತೆ ಅಥವಾ ನಿರಾಕ್ಷೇಪಣಾ ಪತ್ರ ನೀಡುವುದು, ಶಿಕ್ಷಣ ಹಕ್ಕು ಕಾಯ್ದೆಯಡಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಖಾಸಗಿ ಶಾಲೆಗಳಿಗೆ ಶಿಕ್ಷಣ ವೆಚ್ಚ ಮರುಪಾವತಿಯ ಪ್ರಕ್ರಿಯೆ, ಎಲ್ಲಾ ಖಾಸಗಿ ಶಾಲೆ ಮತ್ತು ಕಾಲೇಜುಗಳಲ್ಲಿರುವ ಬೋಧಕ ಮತ್ತು ಮೂಲಸೌಕರ್ಯ ಸಂಪನ್ಮೂಲಗಳ ವಿವರಗಳನ್ನು ಸಾರ್ವಜನಿಕ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸುವುದು.
ಉತ್ತಮ ಶೈಕ್ಷಣಿಕ ಸೇವೆ ನೀಡುವ ನಿಟ್ಟಿನಲ್ಲಿ 2016 ರೊಳಗಾಗಿ ಖಾಸಗಿ ಶಾಲೆ, ಕಾಲೇಜುಗಳೂ ಸೇರಿದಂತೆ ಎಲ್ಲಾ ಶಾಲೆ, ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳ ಆಧಾರ್ ನೋಂದಣಿಯನ್ನು ಪೂರ್ಣಗೊಳಿಸಲಾಗುವುದು. ಪ್ರೌಢಶಾಲೆ ಮತ್ತು ಪದವಿಪೂರ್ವ ಶಿಕ್ಷಣವನ್ನು ಒಂದೇ ಆಡಳಿತ ಮತ್ತು ಕಾರ್ಯವ್ಯವಸ್ಥೆಯಡಿ ತರಲು ಮೂರು ವರ್ಷದ ಕ್ರಿಯಾ ಯೋಜನೆ ರೂಪಿಸಲಾಗುವುದು.
ಶಿಕ್ಷಕರ 6 ತರಬೇತಿ ಕಾಲೇಜುಗಳನ್ನು ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ತರುವುದು, ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿಯಲ್ಲಿ ಅಡಿಗೆಯವರ ಗೌರವಧನವನ್ನು ಮಾಸಿಕ 300ರೂ. ಹೆಚ್ಚಿಸಲಾಗುವುದು. ಯೋಗ ಶಿಕ್ಷಣವನ್ನು ಎಲ್ಲಾ ಸರಕಾರಿ ಶಾಲೆಗಳಲ್ಲಿ ಪ್ರೋತ್ಸಾಹಿಸುವುದು. 2016-17ನೆ ಸಾಲಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಗೆ 17,373 ಕೋಟಿ ರೂ.ಗಳನ್ನು ಒದಗಿಸಲಾಗಿದೆ.







