ಇಂದಿನ ಕಾರ್ಯಕ್ರಮ
ಬೆಳ್ತಂಗಡಿ: ಇಂದು ಬಿವಿಎಲ್ ಪಂದ್ಯಾಟ
ಬೆಳ್ತಂಗಡಿ, ಮಾ.18: ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಶೋಸಿಯೇಶನ್ ನೇತೃತ್ವದಲ್ಲಿ ಐಪಿಎಲ್ ಮಾದರಿಯಲ್ಲಿ ಬೆಳ್ತಂಗಡಿ ತಾಲೂಕು ವಾಲಿಬಾಲ್ ಲೀಗ್ (ಬಿವಿಎಲ್) ಪಂದ್ಯಾಟವನ್ನು ಮಾ.19ರಂದು ಲಾಲದ ಪ್ರಸನ್ನ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಸೋಸಿಯೇಶನ್‌ನ ಅಧ್ಯಕ್ಷ ಪುಷ್ಪರಾಜ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ತಾಲೂಕಿನ ಆಟಗಾರರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಮಾಜಿ ಯುವಜನ ಕ್ರೀಡಾ ಸಚಿವ ಕೆ. ಗಂಗಾಧರ ಗೌಡ ಪಂದ್ಯ ಉದ್ಘಾಟಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ರಂಜನ್ ಜಿ. ಗೌಡ, ಕಾರ್ಯದರ್ಶಿ ಗುರುಪ್ರಸಾದ್, ಕೋಶಾಧಿಕಾರಿ ಶಿಬಿ ಧರ್ಮಸ್ಥಳ ಉಪಸ್ಥಿತರಿದ್ದರು
ಬೋಳಂತೂರು: ಇಂದು ಕಬಡ್ಡಿ ಪಂದ್ಯಾಟ
ವಿಟ್ಲ, ಮಾ.18: ಬೋಳಂತೂರು ಕಲ್ಪನೆಯ ಸೆವೆನ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಕಾರದೊಂದಿಗೆ 60 ಕೆಜಿ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟವು ಮಾ.19ರಂದು ಕಲ್ಪನೆ ಸ್ಟಾರ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಇಂದು ಎಸ್ಸಿ-ಎಸ್ಟಿ ಸಾಧಕರ ಸಾಕ್ಷ್ಯಚಿತ್ರ ಬಿಡುಗಡೆ
ಮಂಗಳೂರು, ಮಾ.18: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಕರ್ನಾಟಕ ಸರಕಾರದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಎಸ್ಸಿ-ಎಸ್ಟಿ ಸಾಧಕರ ಸಾಕ್ಷ್ಯಚಿತ್ರಗಳ ಬಿಡುಗಡೆ ಕಾರ್ಯಕ್ರಮವು ಮಾ.19 ರಂದು ಅಪರಾಹ್ನ 3 ಗಂಟೆಗೆ ಹಂಪನಕಟ್ಟೆಯ ಹೊಟೇಲ್ ಶ್ರೀನಿವಾಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮೂವರು ಸಾಧಕರ ಸಾಕ್ಷ್ಯಚಿತ್ರಗಳನ್ನು ಬಿಡುಗಡೆ ಮಾಡಲಿದ್ದು, ಆರೋಗ್ಯ ಸಚಿವ ಯು.ಟಿ. ಖಾದರ್ ಸಾಧಕರ ಸಾಕ್ಷ್ಯಚಿತ್ರಗಳ ಆಯ್ದ ಭಾಗಗಳ ಪ್ರದರ್ಶನಕ್ಕೆ ಚಾಲನೆಯನ್ನು ನೀಡಲಿರುವರು.
ಶಾಸಕ ಜೆ.ಆರ್.ಲೋಬೊ, ಮೇಯರ್ ಕೆ. ಹರಿನಾಥ್, ದ.ಕ.ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಸಾಧಕರನ್ನು ಅಭಿನಂದಿಸಲಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡಮಿಯ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ವಹಿಸಲಿದ್ದಾರೆ ಎಂದು ಅಕಾಡಮಿಯ ರಿಜಿಸ್ಟ್ರಾರ್ ಉಮರಬ್ಬ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







