ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 1374 ಕೋಟಿ ರೂ.

ಅಲ್ಪಸಂಖ್ಯಾತರ ಕಾಲನಿಗಳ ಮೂಲ ಸೌಕರ್ಯಾಭಿವೃದ್ಧಿ ಕಾಮಗಾರಿಗಳಿಗೆ 100 ಕೋಟಿ ರೂ., ಯುವ ಜನತೆಯಲ್ಲಿ ಅನುಭವಶಾಲಿ ನಾಯಕತ್ವ ಮತ್ತು ಸಾಮರ್ಥ್ಯ ನಿರ್ಮಾಣ ಕಾರ್ಯಕ್ರವನ್ನು ಹಮ್ಮಿಕೊಳ್ಳಲು 13 ಕೋಟಿ ರೂ., ರಾಜ್ಯದಲ್ಲಿನ ಮದ್ರಸಾಗಳ ಆಧುನೀಕರಣ ಹಾಗೂ ಔಪಚಾರಿಕ ಮತ್ತು ಕಂಪ್ಯೂಟರ್ ಶಿಕ್ಷಣ ನೀಡಲು 50 ಕೋಟಿ ರೂ.ಅನುದಾನ. ಎಂಎಸ್‌ಡಿಪಿ ಯೋಜನೆ ಅಡಿಯಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗಿರುವ ಸ್ಥಳಗಳಲ್ಲಿ 10 ವಿದ್ಯಾರ್ಥಿನಿಲಯ/ವಸತಿ ಶಾಲೆ /ವಸತಿ ಕಾಲೇಜುಗಳ ಆರಂಭ.
6 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಮತ್ತು 10 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಮತ್ತು 2 ಹೆಣ್ಣು ಮಕ್ಕಳ ಪದವಿ ಪೂರ್ವ ವಸತಿ ಕಾಲೇಜುಗಳನ್ನು ಪ್ರಾರಂಭಿಸುವುದು. 20 ಮೆಟ್ರಿಕ್ ಪೂರ್ವ ವಸತಿ ನಿಲಯಗಳನ್ನು ಮೆಟ್ರಿಕ್ ನಂತರ ವಸತಿ ನಿಲಯಗಳನ್ನಾಗಿ ಮೇಲ್ದರ್ಜೆಗೇರಿಸುವುದು. ಉತ್ತಮ ಮೂಲಸೌಕರ್ಯ ಹೊಂದಿರುವ 20 ವಸತಿ ನಿಲಯಗಳಲ್ಲಿ, ಪ್ರತಿ ನಿಲಯದಲ್ಲಿ 25 ಸೀಟುಗಳ ಹೆಚ್ಚಳ.
ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಎಲ್ಲ ವಸತಿ ಶಾಲೆಯ/ಕಾಲೇಜುಗಳ ಪ್ರತಿ ವಿದ್ಯಾರ್ಥಿಗೆ ಆಹಾರ ಭತ್ತೆಯನ್ನು 200 ರೂ.ಗಳಷ್ಟು ಹೆಚ್ಚಳ. ಅಲ್ಪಸಂಖ್ಯಾತ ಸಂಬಂಧಿತ ವಿಷಯಗಳ ಬಗ್ಗೆ ವಿಶ್ವವಿದ್ಯಾನಿಲಯಗಳಲ್ಲಿ ಪಿಎಚ್.ಡಿ ಮತ್ತು ಎಂ.ಫಿಲ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಜೆ.ಆರ್.ಎಫ್ ಮಾದರಿಯಲ್ಲಿ ಫೆಲೋಶಿಫ್. ಬೀದರ್‌ನಲ್ಲಿರುವ ಮುಹಮ್ಮದ್ ಗವಾನ್ ಗ್ರಂಥಾಲಯದಲ್ಲಿ ಸಂಶೋಧನಾ ಕೇಂದ್ರವನ್ನು ಪ್ರಾರಂಭ.
ಧಾರ್ಮಿಕ ಅಲ್ಪಸಂಖ್ಯಾತ ವಿಷಯದ ಬಗ್ಗೆ ಕಲಬುರಗಿ ವಿಶ್ವವಿದ್ಯಾನಿಲಯದಲ್ಲಿ ಪೀಠ ಸ್ಥಾಪನೆ. ಸರಕಾರಿ ಉರ್ದು ಶಾಲೆಗಳಿಗೆ 9 ಅಂಶಗಳ ಕಾರ್ಯಕ್ರಮ ಸೌಲಭ್ಯದ ವಿಸ್ತರಣೆ. ಹತ್ತನೆ ತರಗತಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ 500 ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿಗಳ ಪ್ರೋತ್ಸಾಹ ಬಹುಮಾನ. ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ 125 ಕೋಟಿ ರೂ. ಏಡ್ಸ್ ರೋಗಿಗಳು ಮತ್ತು ವಿಕಲಚೇತನ ವ್ಯಕ್ತಿಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಹಣಕಾಸಿನ ನೆರವು. ಸರಕಾರಿ/ಖಾಸಗಿ ಕಾಲೇಜುಗಳಲ್ಲಿ ನರ್ಸಿಂಗ್ ಕೋರ್ಸ್ ಗಳನ್ನು ಅಧ್ಯಯನ ಮಾಡುತ್ತಿರುವ ಮುಸ್ಲಿಮ್, ಕ್ರಿಶ್ಚಿಯನ್, ಜೈನ್, ಸಿಖ್ ಮತ್ತು ಬೌದ್ಧ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಶುಲ್ಕ ತುಂಬಿಕೊಡುವ ಸೌಲಭ್ಯ ವಿಸ್ತರಣೆ.
ಬ್ಯಾರಿ ಸೌಹಾರ್ದ ಭವನಕ್ಕೆ 3 ಕೋಟಿ ಅನುದಾನ
ಬೆಂಗಳೂರು, ಮಾ.18: ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಬ್ಯಾರಿಗಳಿಗೆ ಶುಭ ಸುದ್ದಿಯಿದೆ. ಬೆಂಗಳೂರಿನಲ್ಲಿ ಬಹು ನಿರೀಕ್ಷಿತ ಅಭಿವೃದ್ಧಿ ಕೇಂದ್ರ ಬ್ಯಾರಿ ಸೌಹಾರ್ದ ಭವನ ನಿರ್ಮಾಣಕ್ಕೆ 3 ಕೋಟಿ ರೂಪಾಯಿ ಅನುದಾನವನ್ನು ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಈ ಬ್ಯಾರಿ ಭವನ ನಿರ್ಮಾಣದ ಉಸ್ತುವಾರಿ ಹೊತ್ತಿರುವ ಬೆಂಗಳೂರಿನ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಬಿ.ಎಂ. ಫಾರೂಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. ಬೆಂಗಳೂರಿನ ಎಚ್‌ಬಿಆರ್ ಲೇ ಔಟ್ ನಲ್ಲಿ ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬ್ಯಾರಿ ಭವನ ಸಮಗ್ರ ಅಭಿವೃದ್ಧಿ ಹಾಗು ಸೌಹಾರ್ದದ ಕೇಂದ್ರವಾಗಿ ಮೂಡಿಬರಲಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಮುಖ್ಯಮಂತ್ರಿಯವರು ಶಿಲಾನ್ಯಾಸ ನೆರವೇರಿಸಿದ್ದು ಈಗಾಗಲೇ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ. ಸುಸಜ್ಜಿತ ತರಬೇತಿ ಕೇಂದ್ರ, ಹಾಸ್ಟೆಲ್ , ಸಮುದಾಯ ಭವನ ಇತ್ಯಾದಿಗಳು ಈ ಭಾವನದಲ್ಲಿರುತ್ತವೆ. ನಾವು ಕನಿಷ್ಠ 5 ಕೋಟಿ ರೂಪಾಯಿ ಅನುದಾನ ಸರಕಾರದಿಂದ ನೀಡಬೇಕೆಂದು ವಿನಂತಿಸಿದ್ದೆವು. ಈಗ ಸರಕಾರ 3 ಕೋಟಿ ರೂಪಾಯಿ ನೀಡಿದೆ. ಮುಂದಿನ ಹಂತದಲ್ಲಿ ಉಳಿದ 2 ಕೋಟಿ ರೂಪಾಯಿ ನೀಡಲು ಮತ್ತೆ ಮನವಿ ಮಾಡಿ ಪ್ರಯತ್ನಿಸುತ್ತೇವೆ ಎಂದು ಫಾರೂಕ್ ಅವರು ಹೇಳಿದ್ದಾರೆ.







