ಕುನಿಲ್ ಸಂಸ್ಥೆಯಲ್ಲಿ ಪಿಯು ಶಿಕ್ಷಣ ಆರಂಭ
ಮಂಗಳೂರು, ಮಾ.18: ಕೇರಳದ ಕುನಿಲ್ ಸಂಸ್ಥೆೆಗೆ ದಕ್ಷಿಣ ಕನ್ನಡದ ನಾಟೆಕಲ್‌ನಲ್ಲಿ ಪಿಯುಸಿ ಶಿಕ್ಷಣ ಸಂಸ್ಥೆ ಆರಂಭಿಸಲು ಸರಕಾರದಿಂದ ಅನುಮತಿ ದೊರಕಿದ್ದು, ಪ್ರಸ್ತುತ ಶೈಕ್ಷಣಿಕ ವರ್ಷದ 2016 ರ ಜೂನ್ 1ರಿಂದ ಪ್ರಾರಂಭಗೊಳ್ಳಲಿದೆ ಎಂದು ಕುನಿಲ್ ಸಂಸ್ಥೆಯ ಅಧ್ಯಕ್ಷ ಡಾ. ಫಕ್ರುದ್ದೀನ್ ಕುನಿಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕುನಿಲ್ ಸಂಸ್ಥೆ ದ.ಕ. ಜಿಲ್ಲೆಯ ನಾಟೆಕಲ್, ತುಂಬೆಯಲ್ಲಿ ಎಲ್‌ಕೆಜಿಯಿಂದ ಆರಂಭಗೊಂಡು ಇದೀಗ ಪಿಯುಸಿ ವ್ಯಾಸಂಗಕ್ಕೆ ಸಜ್ಜಾಗಿದೆ. ವಿಜ್ಞಾನ ಹಾಗೂ ವಾಣಿಜ್ಯ ವಿಭಾಗವನ್ನು ಪ್ರಥಮ ವರ್ಷದಲ್ಲಿ ಆರಂಭಿಸಲಿದೆ. ಕುನಿಲ್ ಸಂಸ್ಥೆ ತಮ್ಮ ಈ ಪ್ರಥಮ ಪಿಯುಸಿಯ ಶಿಕ್ಷಣವನ್ನು ಗ್ರಾಜುವೆಟ್ ಪ್ಲೇಸ್ ಯುಕೆ ಇವರೊಂದಿಗೆ ಜಂಟಿಯಾಗಿ ನಡೆಸಲು ಒಪ್ಪಂದವನ್ನು ಮಾಡಿಕೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ಹಾಗೂ ಕಡಿಮೆ ದರದಲ್ಲಿ ಶಿಕ್ಷಣವನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದರು.
ಅಂದಾಜು 3.26 ಎಕ್ರೆ ಜಾಗದಲ್ಲಿ ವಿಶಾಲವಾದ ಕಟ್ಟಡ ಹಾಗೂ ವಿದ್ಯಾರ್ಥಿಗಳಿಗೆ ಬೇಕಾಗುವ ಅತ್ಯುತ್ತಮ ಸೌಲಭ್ಯ, ವಿದ್ಯಾಭ್ಯಾಸಕ್ಕೆ ಬೇಕಾದ ಸವಲತ್ತುಗಳನ್ನು ಒದಗಿಸಲಾಗುವುದು. ಶಿಕ್ಷಣ ಸಂಸ್ಥೆಯಲ್ಲಿ ವಿಶೇಷವಾಗಿ ಉನ್ನತ ಪರೀಕ್ಷೆಗೆ ಬೇಕಾಗುವ ತರಬೇತಿಯನ್ನು ಪರಿಣಿತರ ಸಹಾಯದೊಂದಿಗೆ ಬೋಧಿಸುವುದರೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಬೇಕಾಗುವ ಸೌಲಭ್ಯವನ್ನು ನೀಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕಾರಿ ಅಧಿಕಾರಿ ವಿಕ್ರಮ್ ದತ್ತ್, ಗ್ರಾಜುವೆಟ್ ಪ್ಲೇಸ್ ಯು.ಕೆ.ನ ನಿರ್ದೇಶಕ ಜಾಹೀರ್ ಉಪಸ್ಥಿತರಿದ್ದರು.







