ಬಿಬಿಎಂಪಿಗೆ 4222.73 ಕೋಟಿ ರೂ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನಗರೋತ್ಥಾನ ಯೋಜನೆಯಡಿ 1,000 ಕೋಟಿರೂ., ವಿಶೇಷ ಬಂಡವಾಳ ಯೋಜನೆಗಳಡಿ 2158 ಕೋಟಿರೂ. ಹಾಗೂ ಹಣಕಾಸು ಆಯೋಗ ಮತ್ತು ಇತರೆ ಅನುದಾನಗಳಿಂದ 1,064.73 ಕೋಟಿ ರೂ. ಹೀಗೆ ವಿವಿಧ ಯೋಜನೆಗಳಡಿ ಒಟ್ಟಾರೆ 4,222.73 ಕೋಟಿ ರೂ. ಒದಗಿಸಲಾಗಿದೆ.
ನಗರದ ಆಯ್ದ ಪ್ರಮುಖ 300 ಕಿ.ಮೀ. ಉದ್ದದ ರಸ್ತೆಗಳಿಗೆ ವೈಟ್ ಟಾಪಿಂಗ್, ನಗರದ ಹಳೆ ಮತ್ತು ಹೊಸ ಕೇಂದ್ರ ವಾಣಿಜ್ಯ ಪ್ರದೇಶದ ಪ್ರಮುಖ ರಸ್ತೆಗಳ ಜಾಲವನ್ನು ಟೆಂಡರ್ ಶ್ಯೂರ್ ಮಾದರಿಯಡಿ ಅಭಿವೃದ್ಧಿ ಪಡಿಸುವುದು. ರಸ್ತೆ ಜಾಲದಲ್ಲಿ ಪರ್ಯಾಯ ಮಾರ್ಗಗಳನ್ನು ಒದಗಿಸುವುದಕ್ಕಾಗಿ 1,500 ಕಿ.ಮೀ. ಉದ್ದದ ರಸ್ತೆಗಳ ಅಭಿವೃದ್ಧಿ. ಪಾರಂಪರಿಕ ಮಹತ್ವ ಹೊಂದಿರುವ ರಸೆಲ್ ಮಾರುಕಟ್ಟೆ, ಜಾನ್ಸನ್ ಮಾರುಕಟ್ಟೆ ಮತ್ತು ಕೃಷ್ಣರಾಜೇಂದ್ರ ಮಾರುಕಟ್ಟೆಗಳ ಅಭಿವೃದ್ಧಿ. ನಗರದ ಆಯ್ದ ಪ್ರಮುಖ ಸ್ಥಳಗಳಲ್ಲಿ ಬಹುಮಹಡಿ ಕಾರ್ ಪಾರ್ಕಿಂಗ್ ವ್ಯವಸ್ಥೆ. ನಗರದ ವೈಟ್‌ಫೀಲ್ಡ್ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶಗಳೂ ಸೇರಿದಂತೆ ಪ್ರಮುಖ ಐಟಿ-ಬಿಟಿ ವಲಯಗಳ ಸಮಗ್ರ ಅಭಿವೃದ್ಧಿ. ಸುರಂಜನದಾಸ ರಸ್ತೆ-ಹಳೆ ಮದ್ರಾಸ್ ರಸ್ತೆ, ಸರ್ಜಾಪುರ-ಹರಳೂರು ರಸ್ತೆ ಜಂಕ್ಷನ್ ಹಾಗೂ ಬನ್ನೇರುಘಟ್ಟ ರಸ್ತೆಯಲ್ಲಿ ಹುಳಿಮಾವು ಜಂಕ್ಷನ್,ಅರಕೆರೆ ಜಂಕ್ಷನ್‌ಗಳಲ್ಲಿ ಗ್ರೇಡ್ ಸೆಪರೇಟರ್‌ಗಳ ನಿರ್ಮಾಣ. ಕೆರೆಗಳ ಅಭಿವೃದ್ಧಿಗೆ 100 ಕೋಟಿರೂ., ಘನತ್ಯಾಜ್ಯ ನಿರ್ವಹಣೆಗೆ 500 ಕೋಟಿ ರೂ., ಮಳೆನೀರು ಚರಂಡಿ ನಿರ್ಮಾಣಕ್ಕೆ 800 ಕೋಟಿ ರೂ.,ಬಿಬಿಎಂಪಿ ವ್ಯಾಪ್ತಿಗೆ ಸೇರಿದ 110 ಹಳ್ಳಿಗಳು ಮತ್ತು ನಗರಸಭೆ-ಪುರಸಭೆ ಪ್ರದೇಶಗಳ ಅಭಿವೃದ್ಧಿಗೆ 250 ಕೋಟಿರೂ. ಬಜೆಟ್‌ನಲ್ಲಿ ಒದಗಿಸಲಾಗಿದೆ.





