ಪುತ್ತೂರು : ರೈಲ್ವೆ ಅಧಿಕಾರಿಗಳು ಮತ್ತು ಸಾರ್ವಜನಿಕ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಂದ ಕಾಮಗಾರಿ ಪರಿಶೀಲನೆ

ಪುತ್ತೂರು: ಪುತ್ತೂರು ರೈಲು ನಿಲ್ದಾಣ ಸಂಪರ್ಕ ರಸ್ತೆಯ ಮಡಿವಾಳಕಟ್ಟೆಯಿಂದ ರೈಲು ನಿಲ್ದಾಣದವರೆಗಿನ ಒಟ್ಟು 340 ಮೀಟರ್ ಉದ್ದದ ರಸ್ತೆಯ ಸಂಪೂರ್ಣ ಕಾಮಗಾರಿ ನಡೆಯುತ್ತಿದ್ದು, ಶನಿವಾರ ರೈಲ್ವೆ ಅಧಿಕಾರಿಗಳು ಮತ್ತು ಸಾರ್ವಜನಿಕ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕಾಮಗಾರಿ ಪರಿಶೀಲನೆ ನಡೆಸಿದರು.
ಈಗಾಗಲೇ ಹಳೆಯ ರಸ್ತೆಯನ್ನು ಸಂಪೂರ್ಣ ಅಗೆದು ಕಾಂಕ್ರೀಟ್ ಬೆಡ್ ಹಾಕಲಾಗಿದ್ದು, 2ನೇ ಹಂತದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಯಲಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಈ ಕಾಮಗಾರಿಯೂ ಪೂರ್ಣಗೊಳ್ಲಲಿದ್ದು ಏಪ್ರಿಲ್ 15ಕ್ಕೆ ರಸ್ತೆಯನ್ನು ಸಾರ್ವಜನಿಕ ಬಳಕೆಗೆ ಬಿಟ್ಟು ಕೊಡಲಾಗುವುದು ಎಂದು ಗುತ್ತಿಗೆದಾರರ ಗಿರೀಶ್ ಹೆಬ್ಬಾರ್ ಈ ಸಂದರ್ಭದಲ್ಲಿ ತಿಳಿಸಿದರು.
ಸಾರ್ವಜನಿಕ ಉಪಯೋಗಕ್ಕೂ ಬಳಕೆಯಾಗುತ್ತಿರುವ ಈ ರಸ್ತೆಯನ್ನು 50-50 ಅನುದಾನದಲ್ಲಿ ನಿರ್ಮಿಸಲಾಗುತ್ತಿದೆ. ರೈಲ್ವೆ ಇಲಾಖೆಯು ತನ್ನ ಪಾಲಿನ ಐವತ್ತು ಶೇಕಡಾ ಅನುದಾನವಾಗಿ 40 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ. ಉಳಿದ ಅರ್ಧದಷ್ಟು ಅನುದಾನವನ್ನು ಸ್ಥಳೀಯಾಡಳಿತ ಅಥವಾ ಜನಪ್ರತಿನಿಧಿಗಳು ಅಥವಾ ರಾಜ್ಯ ಸರಕಾರ ನೀಡಬೇಕಾಗಿದ್ದು ರೈಲ್ವೆ ನಿಯಮವಾಗಿದ್ದು, ರೈಲ್ವೇ ಇಲಾಖೆಯ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸಂವಹನ ಮಾಡಲಾಗಿದೆ ಎಂದು ಸೀನಿಯರ್ ಸೆಕ್ಷನ್ ಎಂಜಿನಿಯರ್ ಕೆ.ಪಿ.ನಾಯ್ದು ತಿಳಿಸಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ - ಮಂಗಳೂರು ರೈಲು ಬಳಕೆದಾರರ ಹಿತರಕ್ಷಣಾ ವೇದಿಕೆಯ ಸಂಚಾಲಕ ಸುದರ್ಶನ್ ಮಾತನಾಡಿ, ರೈಲ್ವೆ ಇಲಾಖೆಯ ಮೇಲಧಿಕಾರಿಗಳ ಅನುಮತಿ ಮೇರೆಗೆ ಗುತ್ತಿಗೆದಾರ ಗಿರೀಶ್ ಹೆಬ್ಬಾರ್ ಅವರು ಪ್ರಸ್ತುತ 340 ಮೀಟರ್ ರಸ್ತೆಯ ಪೂರ್ತಿ ಕಾಮಗಾರಿ ನಡೆಸುತ್ತಿದ್ದಾರೆ. 50 ಶೇಕಡಾ ಮೊತ್ತ ಅವರಿಗೆ ರೈಲ್ವೆಯಿಂದ ಮಂಜೂರಾಗಿದೆ. ಉಳಿದ ಮೊತ್ತದಲ್ಲಿ ಒಂದಷ್ಟು ಭಾಗವನ್ನು ನೀಡುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕಿ ಶಕುಂತಳಾ ಶೆಟ್ಟಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ನಾಗರಿಕ ಹಿತರಕ್ಷಣಾ ವೇದಿಕೆಯ ಡಿ.ಕೆ.ಭಟ್, ಪುತ್ತೂರು ಸಿಟಿಜನ್ ರೈಟ್ಸ್ ಸಂಚಾಲಕ ರವೀಂದ್ರನ್, ರೈಲ್ವೆ ಯಾತ್ರಿಕರ ಸಂಘದ ಅಧ್ಯಕ್ಷ ರಾಮಚಂದ್ರ ಪ್ರಭು, ಚಿಗುರು ಗೆಳೆಯರ ಬಳಗದ ರತ್ನಾಕರ ಪ್ರಭು, ಗುಣಕರ್, ಆದಂ ಚಿಕ್ಕಪುತ್ತೂರು ಮತ್ತಿತೆರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





