ಭಟ್ಕಳ: ಬೈಲೂರು ಸಕಾರಿ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಭಟ್ಕಳ: ಸರಕಾರಿ ಪ್ರೌಢಶಾಲೆ ಬೈಲೂರಿನಲ್ಲಿ ಎಸ್.ಎಸ್.ಎಲ್.ಸಿ. ಮಕ್ಕಳ ಬೀಳ್ಕೊಡುಗೆ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬೈಲೂರು ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ನಾಯ್ಕ ಹಸಿವಿನ ಮಹತ್ವವನ್ನು ತಿಳಿಸುತ್ತಾ, ವಿದ್ಯಾರ್ಥಿಗಳು ಇಂದು ಶಾಲೆಯಲ್ಲಿ ಬಿಸಿಯೂಟ, ಹಾಲು, ಮಾತ್ರೆ, ಸೈಕಲ್, ಉಚಿತ ಪುಸ್ತಕ, ಸಮವಸ್ತ್ರ ಎಲ್ಲವನ್ನೂ ಇಲಾಖೆಯ ಸೌಲಭ್ಯದಡಿಯಲ್ಲಿ ಪಡೆಯುತ್ತಿರುವುದರಿಂದ ಓದಿನ ಕಡೆಗೆ ಹೆಚ್ಚು ಮಹತ್ವ ನೀಡಲು ಸಾಧ್ಯವಾಗುವುದು. ವಿದ್ಯಾರ್ಥಿಗಳು ಸರಕಾರ ನೀಡುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಚಾರಿತ್ರ್ಯ ರೂಢಿಸಿಕೊಳ್ಳಬೇಕು. ಉತ್ತಮ ಶಿಕ್ಷಣ ಪಡೆದು ಶಾಲೆಯ, ಊರಿನ, ದೇಶಕ್ಕೆ ಕೀರ್ತಿ ತರಬೇಕೆಂದು ಕೋರಿದರು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ದಿನೇಶ ಅನಂತ ದೇವಡಿಗ ಮತ್ತು ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ ಹತ್ತನೇ ತರಗತಿ ವಿದ್ಯಾರ್ಥಿ ಮಹೇಶ ಲಕ್ಷ್ಮಣ ನಾಯ್ಕನಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಿ ತಮ್ಮ ವಯಕ್ತಿಕವಾಗಿ ಇಬ್ಬರಿಗೂ ತಲಾ ರೂ.500/- ಪ್ರೋತ್ಸಾಹ ಧನ ನೀಡಿದರು. ಕಾರ್ಯಕ್ರಮವನ್ನು ತಾಲೂಕಾ ಪಂಚಾಯತ ಸದಸ್ಯೆ ಗೌರಿ ಗಜಾನನ ದೇವಡಿಗ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾ.ಪಂ. ಮಾಜಿ ಸದಸ್ಯ ಕೇಶವ ಬಲ್ಸೆ ಮಕ್ಕಳ ಕೈಬರಹದ ಪತ್ರಿಕೆ ಹೊತ್ತಿಗೆಯನ್ನು ಬಿಡುಗಡೆಗೊಳಿಸಿದರು. ಯಶೋಧಾ ಸಂಗಡಿಗರು ಪ್ರಾರ್ಥಿಸಿದರೆ, ಮುಖ್ಯಾಧ್ಯಾಪಕಿ ಯಲ್ಲಮ್ಮ ಸ್ವಾಗತಿಸಿದರು. ಶಿಕ್ಷಕಿ ದೀಪಾ ಜಿ. ಶೆಟ್ಟಿ ವರದಿ ವಾಚಿಸಿದರು. ಶಿಕ್ಷಕ ಕು ಮಾರ ಎನ್. ಕೇಣಿ ನಿರೂಪಿಸಿದರು. ಶಿಕ್ಷಕಿ ಪಾರ್ವತಿ ಎನ್. ಹೆಗಡೆ ವಂದಿಸಿದರು.





