ಹತ್ತು ವರ್ಷ ಕಂಬಿ ಎಣಿಸಲಿದ್ದಾರೆಯೇ ಹೃತಿಕ್ ?

ಮುಂಬೈ , ಮಾ. 19 : ಹೃತಿಕ್ - ಕಂಗನಾ ಜಗಳ ದೊಡ್ಡ ರಂಪಾಟವೇ ಆಗಿ ಬೀದಿಗೆ ಬಂದಿದೆ. ಪರಸ್ಪರ ಆರೋಪ - ಪ್ರತ್ಯಾರೋಪಗಳು ಈಗ ಪೊಲೀಸ್ ಸ್ಟೇಶನ್ ಹಾಗು ನ್ಯಾಯಾಲಯದ ಬಾಗಿಲಿಗೆ ಬಂದು ನಿಂತಿದೆ. ಒಬ್ಬರಿಗೊಬ್ಬರು ಕಾನೂನು ನೋಟೀಸ್ ಕಳಿಸಿದ್ದಾರೆ.
ಆದರೆ ಈ ಇಡೀ ಜಗಳದಲ್ಲಿ ಹೃತಿಕ್ ದೊಡ್ಡ ನಷ್ಟದಲ್ಲಿದ್ದಾರೆ ಎನ್ನುತ್ತವೆ ಮೂಲಗಳು. ಕಂಗನಾ ಮಾಡಿರುವ ಆರೋಪಗಳು ಸಾಬೀತಾದರೆ ಹೃತಿಕ್ ಬಹುದೊಡ್ಡ ಸಂಕಷ್ಟದಲ್ಲಿ ಬೀಳಲಿದ್ದಾರೆ. ಏಕೆಂದರೆ ಅವರಿಗೆ ಹತ್ತು ವರ್ಷ ( ಹೌದು !) ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.
ಕಂಗನಾ ವಿರುದ್ಧ ನೋಟೀಸ್ ನಲ್ಲಿ ಹೃತಿಕ್ ಮಾಡಿರುವುದು ಮಾನಹಾನಿಯ ಆರೋಪ. ಆದರೆ ಉಲ್ಟಾ ಕಂಗನಾ ಹಾಕಿರುವುದು ಬೆದರಿಕೆಯ ಆರೋಪ. ಎಲ್ಲಾದರೂ ಇಬ್ಬರ ನಡುವಿನ ಜಗಳ ಸಂಧಾನದಲ್ಲಿ ಮುಗಿದರೆ ಓಕೆ. ಇಲ್ಲದಿದ್ದರೆ ಪ್ರಕರಣ ನ್ಯಾಯಾಲಯಕ್ಕೆ ಹೋಗಿ ವಿಚಾರಣೆಯಲ್ಲಿ ಹೃತಿಕ್ ವಿರುದ್ಧದ ಆರೋಪ ಸಾಬೀತಾದರೆ ಸೂಪರ್ ಸ್ಟಾರ್ ಕಂಬಿ ಎಣಿಸಬೇಕಾಗುತ್ತೆ, ಅದೂ ಹತ್ತು ವರ್ಷ ! ಇದನ್ನು ಕಂಗನಾ ವಕೀಲ ರಿಝ್ವಾನ್ ಸಿದ್ದಿಕ್ ಹೇಳಿದ್ದಾರೆ.
ಆದರೆ ಹೃತಿಕ್ ವಕೀಲ ದೀಪೇಶ್ ಮೆಹತ ಅವರು ಕಂಗನಾ ಹೇಳುತ್ತಿರುವ ಹೃತಿಕ್ ಇಮೇಲ್ ಐ ಡಿ ಯೇ ನಕಲಿ ಎಂದು ಸಾಬೀತಾಗುವ ನಿರೀಕ್ಷೆಯಲ್ಲಿದ್ದಾರೆ.







