ಕೋಲ್ಕತಾದಲ್ಲಿ ಭಾರೀ ಮಳೆ: ಭಾರತ-ಪಾಕ್ ವಿಶ್ವಕಪ್ ಕ್ರಿಕೆಟ್ ಪಂದ್ಯದ ಟಾಸ್ ವಿಳಂಬ

ಕೋಲ್ಕತಾ, ಮಾ.19: ಭಾರತ ಹಾಗೂ ಪಾಕಿಸ್ತಾನ ನಡುವಿನ ಟ್ವೆಂಟಿ-20 ವಿಶ್ವಕಪ್‌ನ ಸೂಪರ್-10 ಪಂದ್ಯದ ಆತಿಥ್ಯವಹಿಸಿರುವ ಕೋಲ್ಕತಾ ನಗರದಲ್ಲಿ ಶನಿವಾರ ಬೆಳಗ್ಗೆ ಯಿಂದ ಭಾರೀ ಮಳೆ ಸುರಿಯುತ್ತಿದ್ದು, ಟಾಸ್ ಹಾರಿಸುವುದು ವಿಳಂಬವಾಗಿದೆ.
ಬಹುನಿರೀಕ್ಷಿತ ಭಾರತ-ಪಾಕ್ ನಡುವಿನ ವಿಶ್ವಕಪ್ ಪಂದ್ಯ ಶನಿವಾರ ರಾತ್ರಿ 7:30ಕ್ಕ್ಕೆ ಆರಂಭವಾಗಬೇಕಾಗಿತ್ತು. ಆದರೆ, ಪದೇ ಪದೇ ಮಳೆ ಆಗಮಿಸುತ್ತಿದ್ದ ಕಾರಣ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ಪ್ಲಾಸ್ಟಿಕ್ ಕವರ್ ಹಾಕಲಾಗಿದೆ.
ಬೆಳಗ್ಗೆ ಆರರಿಂದ ಮೋಡ ಕವಿದ ವಾತಾವರಣವಿತ್ತು. 9 ಗಂಟೆಗೆ ಮಳೆ ಆರಂಭವಾಗಿತ್ತು.
ಅ.8, 2015ರಲ್ಲಿ ಈಡನ್‌ಗಾರ್ಡನ್‌ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕ ನಡುವಿನ ಟ್ವೆಂಟಿ-20 ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೇ ರದ್ದಾಗಿತ್ತು. ಧರ್ಮಶಾಲಾದಲ್ಲಿ ಭದ್ರತೆಯ ಭೀತಿ ಎದುರಾದ ಕಾರಣದಿಂದ ಕೊನೆಯ ಕ್ಷಣದಲ್ಲಿ ಕೋಲ್ಕತಾಕ್ಕೆ ಭಾರತ-ಪಾಕ್ ನಡುವಿನ ವಿಶ್ವಕಪ್ ಪಂದ್ಯವನ್ನು ಸ್ಥಳಾಂತರಿಸಲಾಗಿತ್ತು.
ಇತ್ತೀಚೆಗೆ ಈಡನ್‌ಗಾರ್ಡನ್‌ನಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು, ಸ್ಟೇಡಿಯಂನಲ್ಲಿ ತುಂಬುವ ನೀರು ಬೇಗನೆ ಹರಿದುಹೋಗುವ ವ್ಯವಸ್ಥೆ ಮಾಡಲಾಗಿದೆ. ಪಿಚ್‌ನ ನೀರನ್ನು ಹಿಂಡಿ ತೆಗೆಯುವ ಹೊಸ ಸೂಪರ್ ಸೋಪರ್ ಯಂತ್ರವನ್ನು ಇತ್ತೀಚೆಗೆ ಖರೀದಿಸಲಾಗಿದೆ. ಇದೀಗ ಈಡನ್ ಗಾರ್ಡನ್ಸ್‌ನಲ್ಲಿ ಒಟ್ಟು ಐದು ಸೂಪರ್ ಸೋಪರ್ ಯಂತ್ರಗಳಿವೆ. ಆದರೆ, ಸ್ಟೇಡಿಯಂನ ಡ್ರೈನೇಜ್ ವ್ಯವಸ್ಥೆ ಉತ್ತಮವಾಗಿಲ್ಲ.







