ಜಾನುವಾರು ವ್ಯಾಪಾರಿಗಳ ಹತ್ಯೆ ಪ್ರಕರಣ: ಐವರ ಬಂಧನ
ಬಂಧಿತರಲ್ಲೊಬ್ಬ ಗೋಹತ್ಯೆ ವಿರೋಧಿ ಕಾರ್ಯಕರ್ತ

ಲಾತೆಹಾರ್,ಮಾ.19: ಜಾರ್ಖಂಡ್‌ನ ಬಾಲುಮತ್‌ನಲ್ಲಿ ಇಬ್ಬರು ಮುಸ್ಲಿಂ ಜಾನುವಾರು ವ್ಯಾಪಾರಿಗನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಓರ್ವ ಗೋಹತ್ಯೆ ವಿರೋಧಿ ಸಂಘಟನೆಯ ಕಾರ್ಯಕರ್ತ ಸಹಿತ ಐವರು ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಜಾನುವಾರು ವ್ಯಾಪಾರಿಗಳ ಹತ್ಯೆಯ ಬಳಿಕ ಪ್ರದೇಶದಲ್ಲಿ ಕೋಮುಉದ್ವಿಗ್ನ ಪರಿಸ್ಥಿತಿ ತಲೆದೋರಿದ್ದು, ಪೊಲೀಸರು ನಿಷೇಧಾಜ್ಞೆ ವಿಧಿಸಿದ್ದಾರೆ. ಬಂಧಿತರಾದ ಐವರು ಆರೋಪಿಗಳು ತಾವು ಜಾನುವಾರು ವ್ಯಾಪಾರಿಗಳನ್ನು ಹತ್ಯೆಗೈದುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಜಾನುವಾರುಗಳನ್ನು ಕದ್ದು, ಅವುಗಳನ್ನು ಬೇರೆಡೆ ಮಾರಾಟ ಮಾಡುವ ಉದ್ದೇಶದಿಂದ ಈ ದುಷ್ಕೃತ್ಯವನ್ನೆಸಗಿರುವುದಾಗಿ ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಈ ಅವಳಿ ಕೊಲೆಗಳಲ್ಲಿ ಶಾಮೀಲಾದ ಎಂಟು ಮಂದಿಯ ಪೈಕಿ ಐವರನ್ನು ಬಂಧಿಸಲಾಗಿದೆ. ಇತರ ಮೂವರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಕೂಡಲೇ ಬಂಧಿಸಲಾಗುವುದು. ಅವರ ಬಗ್ಗೆ ನಾವು ಸಂಪೂರ್ಣ ವಿವರಗಳನ್ನು ಕಲೆಹಾಕಿದ್ದೇವೆ’’ ಲಾತೆಹಾರ್‌ನ ಪೊಲೀಸ್ ಅಧೀಕ್ಷಕ ಅನೂಪ್ ಭರ್ತರಾಯ್ ತಿಳಿಸಿದ್ದಾರೆ. ಆರೋಪಿಗಳು ಈ ಹಿಂದೆಯೂ ಜಾನುವಾರು ವ್ಯಾಪಾರಿಗಳಿಗೆ ಬೆದರಿಕೆಯೊಡ್ಡಿದ್ದರೆಂದು ಅವರು ಹೇಳಿದ್ದಾರೆ.
ಬಂಧಿತ ಆರೋಪಿಗಳಲ್ಲೊಬ್ಬನಾದ ಮಿಥಿಲೇಶ್ ಪ್ರಸಾದ್ ಸಾಹು, ‘ಗೋ ಕ್ರಾಂತಿ ಮಂಚ್’ ಎಂಬ ಗೋಹತ್ಯೆ ವಿರೋಧಿ ಸಂಘಟನೆಯ ಕಾರ್ಯಕರ್ತನೆನ್ನಲಾಗಿದೆ.
ಲಾತೆಹಾರ್ ಸಮೀಪದ ಗ್ರಾಮವೊಂದರಲ್ಲಿ ಜಾನುವಾರು ವ್ಯಾಪಾರಿಗಳಾದ 32 ವರ್ಷ ವಯಸ್ಸಿನ ಮಝ್ಲುಂ ಅನ್ಸಾರಿ ಹಾಗೂ 13 ವರ್ಷ ವಯಸ್ಸಿನ ಇಮ್ತಿಯಾಝ್ ಖಾನ್‌ರ ಗಾಯದ ಗುರುತುಗಳಿದ್ದ ಶವಗಳು ಮರವೊಂದರಲ್ಲಿ ನೇತಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇವರಿಬ್ಬರು ನೆರೆಯ ಚಾತ್ರಾ ಜಿಲ್ಲೆಯಲ್ಲಿ ನಡೆಯುವ ವಾರ್ಷಿಕ ಜಾನುವಾರು ಜಾತ್ರೆಯಲ್ಲಿ ಮಾರಾಟ ಮಾಡಲು ಸುಮಾರು 12 ಕೋಣಗಳನ್ನು ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಅವರನ್ನು ಹತ್ಯೆಗೈಯಲಾಗಿದೆ.
ಈ ಮಧ್ಯೆ ಜಾನುವಾರು ವ್ಯಾಪಾರಿಗಳ ಹತ್ಯೆಯ ಬಳಿಕ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದ ಬಾಲುಮಥ್‌ನಲ್ಲಿ ಪರಿಸ್ಥಿತಿ ನಿಧಾನವಾಗಿ ಸಹಜತೆಯತ್ತ ಮರಳತೊಡಗಿದೆಯಾದರೂ, ನಗರದಲ್ಲಿ ಪೊಲೀಸರು ಕಟ್ಟೆಚ್ಚರದ ಕಾವಲು ಕಾಯುತ್ತಿದ್ದಾರೆ.
ಕಾಂಗ್ರೆಸ್‌ನಿಂದ ಸತ್ಯಶೋಧ ತಂಡ
ಜಾನುವಾರು ವ್ಯಾಪಾರಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸತ್ಯಶೋಧಕ ತಂಡವೊಂದನ್ನು ತಾನು ಘಟನಾ ಪ್ರದೇಶಕ್ಕೆ ಕಳುಹಿಸುವುದಾಗಿ ಕಾಂಗ್ರೆಸ್ ತಿಳಿಸಿದೆ.







