ರಾಜ್ಯದ ಕ್ಷಮೆಯಾಚಿಸಿದ ಡಿಕೆಶಿ
ಬಜೆಟ್ ಮಂಡನೆ ವೇಳೆ ಕೈಕೊಟ್ಟ ಕರೆಂಟ್

ಬೆಂಗಳೂರು, ಮಾ. 19: ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ನಡೆದ 'ಕರೆಂಟ್ ಕೈಕೊಟ್ಟ ಪ್ರಸಂಗ'ಕ್ಕೆ ರಾಜ್ಯದ ಜನರ ಕ್ಷಮೆಯಾಚಿಸಿದ ಇಂಧನ ಸಚಿವ ಡಿ.ಕೆ. ಶಿವಕುಮಾರ್, ಈ ಅಚಾತುರ್ಯದಿಂದ ಇಲಾಖೆಗೆ ಮುಜುಗುರ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಶನಿವಾರ ಎನ್‌ಎಸ್‌ಯುಐ ರಾಜ್ಯ ಕಾರ್ಯಕಾರಿಣಿ ಸಭೆ ಮತ್ತು ವೆಬ್‌ಸೈಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಘಟನೆಗೆ ಸಂಬಂ ಧಿಸಿದಂತೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ತನಿಖೆ ನಡೆದಿದೆ. ದೂರ ವಾಣಿ ಮೂಲಕ ನನಗೆ ವಿಷಯ ತಿಳಿಸಲಾಗಿದೆ. ಆದರೆ, ಈ ಕುರಿತ ಲಿಖಿತಮಾಹಿತಿ ಇನ್ನೂ ನನ್ನ ಕೈಸೇರಿಲ್ಲ. ಇಲಾಖೆಗೆ ಮುಜು ಗರ ತಂದ ಈ ಘಟನೆಗೆ ಕಾರಣರಾದವರು ಯಾರೇ ಆಗಿದ್ದರೂ ಅವರ ತಲೆದಂಡ ಆಗಲಿದೆ ಎಂದು ಹೇಳಿದರು. ಅಧಿಕಾರಿಗಳು ಮತ್ತು ನನ್ನ ನಡುವಿನ ಸಂಬಂಧ ಚೆನ್ನಾಗಿ ಇದೆ. ಅಧಿಕಾರಿಗಳು ಲಿಖಿತ ವರದಿ ಕೊಟ್ಟ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಸ್ಪಷ್ಟಪಡಿಸಿದರು. ವಿದ್ಯುತ್ ಕೈಕೊಟ್ಟ ಸಮಯದಲ್ಲಿ ವಿಧಾನಸೌಧದ ಮೂರನೆ ಮಹಡಿಯಲ್ಲಿ ವೆಲ್ಡಿಂಗ್ ಕೆಲಸ ನಡೆಯುತ್ತಿತ್ತು. ಈ ವೇಳೆ ಅಲ್ಲಿ ಬೆಂಕಿಯ ಕಿಡಿ (ಸ್ಪಾರ್ಕ್) ಕಂಡುಬಂದಿವೆ. ಆಗ ಯಾರೋ ವಿದ್ಯುತ್ ಸಂಪರ್ಕದ ಸ್ವಿಚ್ ಆಫ್ ಮಾಡಿದ್ದಾರೆ. ಅದೇನೇ ಇರಲಿ, ಈ ಘಟನೆ ನಿಜಕ್ಕೂ ನನಗೆ ಕೂಡ ಮುಜುಗುರ ತಂದಿದೆ ಎಂದರು. ಸಿದ್ದರಾಮಯ್ಯ ರಾಹುಕಾಲದಲ್ಲಿ ಬಜೆಟ್ ಮಂಡಿಸಿದ ಸಂಗತಿ ಅವರ ನಂಬಿಕೆಗೆ ಬಿಟ್ಟ ವಿಚಾರ ಎಂದರು.





